ಚಾಮರಾಜನಗರ: ಜಿಲ್ಲೆಯ ವಿವಿಧ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್ ಶಿಕ್ಷಣ, ಡಿಜಿಟಲ್ ಕಲಿಕೆ, ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಇನ್ಫೋಸಿಸ್, ಮೈಸೂರಿನ ರೋಟರಿ ಪಂಚಶೀಲ ಸಂಸ್ಥೆ ಇದೇ ಅಕ್ಟೋಬರ್ 10ರಂದು ಚಾಲನೆ ನೀಡಲಿರುವ ಹಿನ್ನೆಲೆಯುಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂಮ್ ಸಭೆಯ ಮೂಲಕ ಇನ್ಫೋಸಿಸ್, ಮೈಸೂರಿನ ರೋಟರಿ ಪಂಚಶೀಲ ಸಂಸ್ಥೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಭೆ ನಡೆಸಿದರು.
ಇನ್ಫೋಸಿಸ್ ಸಂಸ್ಥೆ ಜಿಲ್ಲೆಯ 50 ಶಾಲೆಗಳಿಗೆ ಸ್ಪ್ರಿಂಗ್ ಬೋರ್ಡ್ ಮೂಲಕ ಗಣಕಯಂತ್ರ ಶಿಕ್ಷಣ ನೀಡಲಿದ್ದಾರೆ. ಈ ಸೌಲಭ್ಯಕ್ಕೆ ಏಕೋಪಾಧ್ಯಾಯ ಶಾಲೆಗಳು, ಅರಣ್ಯ ಪ್ರದೇಶದ, ವಿದ್ಯುತ್ ಸಂಪರ್ಕ ಇಲ್ಲದ, ರಸ್ತೆ ವ್ಯವಸ್ಥೆ ಹೊಂದಿಲ್ಲದ ಶಾಲೆಗಳು ಹಾಗೂ ಸಂಪರ್ಕರಹಿತ ಪ್ರದೇಶದಲ್ಲಿರುವ 14 ಶಾಲೆಗಳು (ಐ.ಟಿ.ಡಿ.ಪಿ) ಶಾಲೆಗಳನ್ನು ಒಳಗೊಂಡ 50 ಸರ್ಕಾರಿ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಪಟ್ಟಿಯನ್ನು ಪ್ರಸ್ತುತಪಡಿಸಲಾಯಿತು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಶಾಲೆಗಳ ಪಟ್ಟಿಯನ್ನು ಪರಾಮರ್ಶಿಸಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಪರಿಹಾರ ಕಂಡುಕೊಂಡು ಡಿಜಿಟಲ್ ಶಿಕ್ಷಣ ನೀಡಬೇಕು. ಕನ್ನಡ ಮಾಧ್ಯಮದಲ್ಲಿಯೂ ಶಿಕ್ಷಣ ಇರಬೇಕು. ಸ್ವಕಲಿಕೆಗೆ ಹೆಚ್ಚಿನ ಮಹತ್ವ ಹೊಂದಿರುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಐ.ಟಿ.ಐ, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕೋರ್ಸ್‍ಗಳನ್ನು ನಡೆಸುವಂತೆ ಸೂಚಿಸಿದರು.
ಇಂಟರ್‍ನೆಟ್ ಸೌಲಭ್ಯವಿಲ್ಲದ ಶಾಲೆಗಳಿಗೆ ಆಫ್‍ಲೈನ್ ಮೂಲಕ ಶಿಕ್ಷಣ ನೀಡಬೇಕು. ಸಂಚಾರಿ ಲ್ಯಾಬ್ ಮೂಲಕ ಡಿಜಿಟಲ್ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದು, ಜಿಲ್ಲೆಯಲ್ಲಿಯೂ ಈ ಸೌಲಭ್ಯ ವ್ಯವಸ್ಥೆ ಮಾಡಬೇಕು ಎಂದರು.
ಅಕ್ಟೋಬರ್ 10ರಂದು ಡಿಜಿಟಲ್ ಕಲಿಕೆ, ತಾಂತ್ರಿಕ ಸೌಲಭ್ಯ ಕಲ್ಪಿಸುವ ಉದ್ಘಾಟನಾ ಕಾರ್ಯಕ್ರಮದ ವೇಳೆ ಶಿಕ್ಷÀಕರು, ವಿದ್ಯಾರ್ಥಿಗಳು, ಪೋಷಕರು, ಇನ್ಫೋಸಿಸ್ ಸಂಸ್ಥೆಯವರೊಂದಿಗೆ ಮುಕ್ತ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದ 43 ಬುಡಕಟ್ಟು ವಿದ್ಯಾರ್ಥಿಗಳಿಗೆ 3 ತಿಂಗಳ ವಸತಿಯುಕ್ತ ತರಗತಿ ನಡೆಸಿ ಅವರಿಗೆ ಮಾರ್ಗದರ್ಶಕ ಶಿಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ಮೈಸೂರಿನ ಇನ್ಫೋಸಿಸ್ ಸಂಸ್ಥೆಯ ಬಿಳಿಗಿರಿರಂಗ, ಕೆ.ಎಸ್. ಸುಂದರ್, ಡಾ. ಮೀನಾಕ್ಷಿ, ರೋಟರಿ ಪಂಚಶೀಲ ಸಂಸ್ಥೆಯ ಕಿರಣ್ ರಾಬರ್ಟ್, ಕೇಶವ್ ಹೆಬ್ಬಾಳ್, ಡಾ. ಆರ್.ಎಸ್. ನಾಗರಾಜು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.