ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯ

ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿವೃತ್ತ ನಿರ್ದೇಶಕ ಶಿವಶಂಕರ್

ಮೈಸೂರು: ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯವೆಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ನಿರ್ದೇಶಕ ಶಿವಶಂಕರ್ ಹೇಳಿದರು.

ಅವರು ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಿದ್ದ 28ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಮಾಜದ ಸಾಧಕರುಗಳಿಗೆ ಶ್ರೀ ಭಗೀರಥ ರತ್ನ ಪ್ರಶಸ್ತಿ ಪ್ರದಾನ, ನಿವೃತ್ತ ಹಾಗೂ ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನೌಕರರುಗಳಿಗೆ, ಸಮಾಜದ ಗಣ್ಯರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಪ್ಪಾರ ಸಮುದಾಯಕ್ಕೆ ವಿದ್ಯೆಯೊಂದೇ ಶಕ್ತಿ. ಹಾಗಾಗಿ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅನಾದಿ ಕಾಲದಿಂದಲೂ ಮೂಲ ಕಸುಬನ್ನು ಮುಂದುವರಿಸಿಕೊಂಡು ಬಂದಿರುವ ಹಿರಿಯರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ಈ ಹಿಂದೆ ಶೇ60ರಷ್ಟು ಅಂಕ ಪಡೆದವರನ್ನು ಪುರಸ್ಕರಿಸಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು ಶೇ90ರಷ್ಟು ಅಂಕ ಪಡೆದವರನ್ನು ಗುರುತಿಸಲಾಗುತ್ತಿದ್ದು ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ ಎಂದರು. ಸಮಾಜದ ಮಕ್ಕಳು ಹೆಚ್ಚು ಅಂಕ ಪಡೆದು ಪ್ರತಿಭಾ ಪುರಸ್ಕಾರ ಪಡೆದುಕೊಳ್ಳುತ್ತಿದ್ದಾರೆ. ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುತ್ತಿದೆ. ಈ ಪ್ರಮಾಣ ಹೆಚ್ಚಾಗಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯವೆಂದರು. ಸಮಾಜದಲ್ಲಿ ಉಪ್ಪಾರ ಸಮುದಾಯದವರು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ರಾಜಕೀಯ ಸ್ಥಾನಮಾನಗಳು ಹೆಚ್ಚಾಗಿ ಲಭಿಸಬೇಕು. ವೈಜ್ಞಾನಿಕ ರಾಜಕೀಯ ಮೀಸಲಾತಿಗೆ ಸರ್ಕಾರದ ಗಮನ ಸೆಳೆಯಬೇಕು. ಇದಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.

ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಶಂಕರ ಬೆಳ್ಳುಬ್ಬಿ ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಮಾಡಲು ಗುರಿ ಹಾಕಿಕೊಳ್ಳಬೇಕು. ಕನಸು ನನಸಾಗಿಸಲು ಶ್ರಮಿಸಬೇಕು. ಯಾವುದೇ ಕೀಳರಿಮೆ ಹೊಂದಬಾರದು. ಉತ್ತಮರ ಸಹವಾಸ ಮಾಡಿ ಒಳ್ಳೆಯ ನಡವಳಿಕೆ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜವು ನಮ್ಮನ್ನು ಉತ್ತಮ ರೀತಿಯಲ್ಲಿ ನೋಡುತ್ತದೆ. ಹಿರಿಯರ ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ಭಗೀರಥ ವಿದ್ಯಾಶ್ರೀ”, ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ ಪಡೆದವರಿಗೆ “ಭಗೀರಥ ವೈದ್ಯಶ್ರೀ”, ಪಿಹೆಚ್‌ಡಿ ಪದವೀಧರರಿಗೆ “ಭಗೀರಥ ಪ್ರತಿಭಾ ರತ್ನ”, ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ “ಭಗೀರಥ ಸಮಾಜ ಸೇವಾ ರತ್ನ”, “ಭಗೀರಥ ಯೋಗ ರತ್ನ”, “ಭಗೀರಥ ಕಲಾರತ್ನ”, “ಭಗೀರಥ ವಿಶಿಷ್ಟ ಕ್ರೀಡಾರತ್ನ”, “ಭಗೀರಥ ಕೃಷಿ ರತ್ನ”, “ಭಗೀರಥ ವಿಶಿಷ್ಟ ಸಮಾಜ ಸೇವಾ ರತ್ನ”, ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಳವಳ್ಳಿಯ ಅಯ್ಯನ ಸರಗೂರು ಮಠದ ಶ್ರೀ ಮಹದೇವ ಸ್ವಾಮಿರವರು ವಹಿಸಿದ್ದರು. ಶ್ರೀ ಭಗೀರಥ ಮಹರ್ಷಿರವರ ಭಾವಚಿತ್ರವನ್ನು ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ್ ಅನಾವರಣಗೊಳಿಸಿದರೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ.ಆರ್.ಶಿವರಾಜು ವಹಿಸಿದ್ದರು.

ಸಮಾರಂಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷರಾದ ಲತಾಸಿದ್ದಶೆಟ್ಟಿ, ಸಿ.ಎ.ಮಹದೇವಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಜೆ.ಯೋಗೇಶ್, ಸಿದ್ದರಾಜು, ಸಂಘದ ಗೌರವ ಸಲಹೆಗಾರ ಜಗನ್ನಾಥ್ ಸಾಗರ್, ಗೌರವಾಧ್ಯಕ್ಷ ಜವರಶೆಟ್ಟಿ, ಉಪಾಧ್ಯಕ್ಷ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಲಿಂಗಣ್ಣ, ಮೈಸೂರು ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಶಿವನಂಜಶೆಟ್ಟಿ, ಪಿಎಸ್‌ಐ ಕೋಟೇಗೌಡ, ಕರ್ನಾಟಕ ಪ್ರೆಸ್ ಕ್ಲಬ್ ಕೆ.ಆರ್.ನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್, ಕೆ.ಆರ್.ನಗರ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಕಾಟ್ನಾಳು ಮಹದೇವ, ಮುಖಂಡರಾದ ಗಂಗಯ್ಯ, ಸೋಮಶೇಖರಪ್ಪ, ಜೆ.ಮಹೇಶ್, ಕೃಷ್ಣಸ್ವಾಮಿ, ಫಿಲಂ ಮಹದೇವಶೆಟ್ಟಿ, ಕಳಸೇಗೌಡ, ಮಹದೇವ, ಸಿದ್ದಶೆಟ್ಟಿ, ಮಂಜುನಾಥ್, ಹೆಚ್.ಜಿ.ಗೋವಿಂದ, ಜ್ಞಾನಾಮೃತ ಸೇವಾ ಸಂಸ್ಥೆಯ ಅಧ್ಯಕ್ಷ ಹೆಚ್.ಕೆ.ನಾಗೇಶ, ಪ್ರಧಾನ ಕಾರ್ಯದರ್ಶಿ ಎಸ್.ಆರ್.ರವಿಕುಮಾರ್, ಆರ್.ಮನು, ಮಹದೇವಶೆಟ್ಟಿ, ಪ್ರಸನ್ನ, ನಾಗರಾಜು, ಸಿದ್ದು, ಎಂ.ಲಕ್ಕಶೆಟ್ಟಿ, ಕೆ.ಬಿ.ಚನ್ನಬಸವಶೆಟ್ಟಿ, ಗೋವಿಂದರಾಜು, ಎಂ.ಕುಮಾರಶೆಟ್ಟಿ, ರಾಜು, ಚಲನಚಿತ್ರ ಸಾಹಸ ಕಲಾವಿದ ಪಿ.ಸೋಮು, ರಂಗರಾಜು, ಟಿ.ಕೃಷ್ಣ, ಕೆ.ಟಿ.ಮಾಸ್ತಿಗೌಡ, ಎಸ್.ಕೆ.ವೆಂಕಟೇಶ್, ಟಿ.ರಾಮಕೃಷ್ಣ, ಬಸವೇಗೌಡ, ಸಿದ್ದರಾಜು, ಕೆ.ಪಿ.ಪುಟ್ಟಸ್ವಾಮಿ, ಮಾಗಳಿ ರಾಮೇಗೌಡ, ನಾಗರಾಜು, ರವಿ, ಸಿದ್ದರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *