ಕಾರಾಗೃಹ ಬಂಧಿಗಳಿಗೆ ಸುಸಜ್ಜಿತ ಕಂಪ್ಯೂಟರ್ ತರಬೇತಿ

ಚಾಮರಾಜನಗರದಲ್ಲಿ ವಿನೂತನ ಕಾರ್ಯಕ್ರಮ

ಚಾಮರಾಜನಗರ: ಇಡೀ ರಾಜ್ಯದಲ್ಲೇ ಮೊದಲು ಎನ್ನಬಹುದಾದ ಕಾರಾಗೃಹ ಬಂಧಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡುವ ವಿನೂತನ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆ ಮಾದರಿಯಾಗಿದೆ.

ಜಿಲ್ಲಾಧಿಕಾರಿಯವರಾದ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿ ಹಾಗೂ ಆಸಕ್ತಿಯಿಂದ ಚಾಮರಾಜನಗರದ ಜಿಲ್ಲಾ ಕಾರಾಗೃಹ ಬಂಧಿಗಳಿಗೆ ಮೈಸೂರಿನ ಇನ್‍ಫೋಸಿಸ್ ರೋಟರಿ ಪಂಚಶೀಲ ಸಹಯೋಗದೊಂದಿಗೆ ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲೇ ಕಂಪ್ಯೂಟರ್ ತರಬೇತಿ ಪಡೆಯಲು ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನೊಳಗೊಂಡ ತರಬೇತಿಗೆ ಇಂದು ಚಾಲನೆ ದೊರೆತಿದೆ.

ಕಾರಾಗೃಹ ಕಟ್ಟಡದಲ್ಲಿಯೇ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಇನ್‍ಫೋಸಿಸ್ ಸಹಕಾರದೊಂದಿಗೆ ತರಬೇತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತರಬೇತಿ ಕೊಠಡಿಯಲ್ಲಿ ಕಲಿಕಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್ ಅರ್ಥೈಸುವ ಕನ್ನಡ ಕಿರುಪುಸ್ತಕಗಳನ್ನೂ ಸಹ ಇಡಲಾಗಿದೆ.

ಸುಸಜ್ಜಿತ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಶಾಸಕರಾದ ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಕಾರಾಗೃಹ ಕಟ್ಟಡದಲ್ಲಿ ಇಂದು ಒಟ್ಟಾಗಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಏರ್ಪಾಡಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಬದುಕಿನಲ್ಲಿ ಬದಲಾವಣೆಯಾಗಲು ಅಪೂರ್ವ ಅವಕಾಶವನ್ನು ಜಿಲ್ಲಾಧಿಕಾರಿಗಳು ಹಾಗೂ ಇನ್‍ಫೋಸಿಸ್ ಸಂಸ್ಥೆ ಮಾಡಿಕೊಟ್ಟಿದೆ. ಪರಿಶ್ರಮ, ಗುರಿ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಬಂಧಿಗಳು ಇಲ್ಲಿಂದ ಹೊರಹೋದ ಮೇಲೆ ಕಲಿತುಕೊಂಡ ಕಂಪ್ಯೂಟರ್ ಶಿಕ್ಷಣ ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಕೆಲ ದಿನಗಳ ಹಿಂದೆ ಸಾಕ್ಷರತಾ ಕಾರ್ಯಕ್ರಮಕ್ಕಾಗಿ ಕಾರಾಗೃಹಕ್ಕೆ ಬಂದ ವೇಳೆ ಕಾರಾಗೃಹ ಬಂಧಿಗಳಿಗೂ ಕಂಪ್ಯೂಟರ್ ಶಿಕ್ಷಣ ನೀಡಬೇಕೆಂಬ ಆಲೋಚನೆ ಬಂತು. ಅಂದೇ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದೆ. ಈ ಆಶಯ ಸಾಕಾರಗೊಳಿಸುವ ದಿನ ಇಂದು ಬಂದಿದೆ. ಇನ್‍ಫೋಸಿಸ್ ಸೇರಿದಂತೆ ಇತರೆ ಸಂಸ್ಥೆಗಳು ನಮ್ಮ ಮನವಿಗೆ ಒಗೊಟ್ಟು ಇಲ್ಲಿನ ಬಂಧಿಗಳಿಗೆ ಅತ್ಯಾಧುನಿಕ 10 ಕಂಪ್ಯೂಟರ್, ಪ್ರಿಂಟರ್‍ಗಳನ್ನು ನೀಡಿ ತರಬೇತಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿದೆ. ಕಾರಾಗೃಹ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಎಲ್ಲರಿಗೂ ಅಭಿನಂದಿಸುವುದಾಗಿ ನುಡಿದರು.

ಕಾರಾಗೃಹದಲ್ಲಿ ಇರುವ ಸಮಯ ಸದುಪಯೋಗವಾಗಲಿ. ಇಲ್ಲಿಂದ ಹೊರಹೋದ ಮೇಲೆ ಸ್ವಂತ ಶಕ್ತಿಯ ಮೇಲೆ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಓದಿಲ್ಲದೆ ಇರುವವರು ಸಹ ಕಂಪ್ಯೂಟರ್ ಕಲಿಯಲು ಅವಕಾಶವಿದೆ. ಇಲ್ಲಿ ಅನೇಕ ಬಗೆಯ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಈಗಿರುವ ಗ್ರಂಥಾಲಯದ ಜೊತೆ ಇ ಲೈಬ್ರರಿ ಸಹ ಆರಂಭಿಸಿದರೆ ಬಂಧಿಗಳಿಗೆ ಅವರವರ ಭಾಷೆಯಲ್ಲಿಯೇ ಓದಲು ಅನುಕೂಲ ಮಾಡಿಕೊಡಬಹುದು. ಈ ನಿಟ್ಟಿನಲ್ಲಿ ಸಂಸ್ಥೆಗಳ ಸಹಕಾರ ಬಯಸುವುದಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಇನ್‍ಫೋಸಿಸ್‍ನ ಸುಂದರ್ ಕೆ.ಎಸ್. ಅವರು ಮಾತನಾಡಿ ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು. ಮನಸ್ಸನ್ನು ಮೆಟ್ಟಿ ನಿಲ್ಲಿ ಸಾಧನೆ ಪರಿವರ್ತನೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಕಂಪ್ಯೂಟರ್ ತರಬೇತಿಗೆ ಮುಂದಾಗಿದ್ದೇವೆ. ಬದುಕಿನಲ್ಲಿ ಜ್ಞಾನ ಹೆಚ್ಚಿಸಿಕೊಂಡು ಮುಂದೆ ಸ್ವತಂತ್ರ ಜೀವನ ನಡೆಸಬಹುದು. ಇದಕ್ಕಾಗಿ ನಿಮ್ಮ ಜೊತೆಯಲ್ಲಿ ನಾವಿರುತ್ತೇವೆ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಎನ್.ಎಸ್. ಶಿವಕುಮಾರ್ ಅವರು ಮಾತನಾಡಿ ಕಾರಾಗೃಹದಲ್ಲಿ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ಹೊಸ ಕಾರ್ಯಕ್ಕೆ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆ ಮೊದಲು ಎನಿಸಿದೆ. ಈ ಅವಕಾಶ ಕಲ್ಪಿಸಿದ ಜಿಲ್ಲಾಧಿಕಾರಿ, ಇನ್‍ಫೋಸಿಸ್ ಸಂಸ್ಥೆ ಹಾಗೂ ಇತರೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಇನ್‍ಫೋಸಿಸ್ ಸಂಸ್ಥೆಯ ಬಿಳಿಗಿರಿರಂಗ, ಸತೀಶ್ ವಿ.ಎನ್., ಮೀನಾಕ್ಷಿ, ಪುಟ್ಟಸ್ವಾಮಿ, ನಿವೃತ್ತ ಡಿಐಜಿ ರಾಜೇಂದ್ರಪ್ರಸಾದ್, ಕಿರಣ್, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *