ಕ್ರೀಡೆಗಳು ಪ್ರಗತಿಯ ಜೊತೆಗೆ ಸಾಮರಸ್ಯ, ಸ್ನೇಹವನ್ನು ಬಿಂಬಿಸುತ್ತದೆ : ಮರಿತಿಬ್ಬೇಗೌಡ

ಚಾಮರಾಜಗನಗರ: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಜೊತೆಗೆ ಸಾಮರಸ್ಯ, ಸ್ನೇಹ, ಸಹ ಜೀವನವನ್ನು ರೂಪಿಸುತ್ತವೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಹಾಗೂ ಶಾಸಕ ಮರಿತಿಬ್ಬೇಗೌಡ ತಿಳಿಸಿದರು.

ನಗರದ ಜೆಎಸ್‍ಎಸ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 14/17 ವರ್ಷಗಳ ವಯೋಮಿತಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ/ ಬಾಲಕಿಯರ ಮೈಸೂರು ವಿಭಾಗ ಮಟ್ಟದ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾವಳಿ ಸಮರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡಾಕೂಟದ ಬಗ್ಗೆ ಆಸಕ್ತಿ ಮೂಡಿಸಲು ಇಂಥ ಕ್ರೀಡೆಗಳು ಅತ್ಯವಶ್ಯಕವಾಗಿದೆ. ಸದಾ ಪಠ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಹೆಚ್ಚು ಮುಖ್ಯವಾಗಿರುತ್ತವೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮಥ್ರ್ಯ ಹೆಚ್ಚಳ ಹಾಗೂ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಾಗುತ್ತದೆ. ವಿಭಾಗೀಯ ಮಟ್ಟದಲ್ಲಿ ಭಾಗವಹಿಸಿರುವ ಮಕ್ಕಳು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತರಬೇಕು. ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಪ್ರಧಾನವಾಗಿರಬೇಕು. ಹೀಗಾಗಿ ವಿದ್ಯಾರ್ಥಿಗಳು ಗೆದ್ದರೆ ಹಿಗ್ಗದೆ, ಸೋತರು ಹತಾಶರಾಗದೇ ಪರಿಶ್ರಮ ಪಟ್ಟು ಮುಂದೆ ಗೆಲ್ಲುವ ಅವಕಾಶಗಳಿಗೆ ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದರು.

ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್‍ಪ್ರಸಾದ್ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಪರಿತೋಷಕ ನೀಡಿ ಮಾತನಾಡಿ, ಕ್ರೀಡೆಗಳನ್ನು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ವಿಭಾಗೀಯ ಮಟ್ಟದ ಕ್ರೀಡಾಕೂಟ ಆಯೋಜನೆಯಾಗುತ್ತಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಉಡುಪಿ, ದಕ್ಷಿಣ ಕನ್ನಡ, ಹಾಸನ, ಮಂಡ್ಯ ಮೈಸೂರು ಭಾಗಗಳ ವಿದ್ಯಾರ್ಥಿಗಳು ನಮ್ಮ ಚಾಮರಾಜನಗರ ಜಿಲ್ಲೆಗೆ ಆಗಮಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಸಾಧನೆಯ ಮೈಲುಗಲ್ಲಿನಲ್ಲಿ ನಮ್ಮ ಜಿಲ್ಲೆಯು ಸಹ ಶಾಶ್ವತವಾಗಿ ಉಳಿಯುವಂತೆ ಆಗುತ್ತದೆ. ಜೀವನ ಪರ್ಯಾಂತ ಜಿಲ್ಲೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಗಡಿ ಜಿಲ್ಲೆಯಿಂದ ಉತ್ತಮ ಅತಿಥ್ಯವನ್ನು ನೀಡಿದ್ದೇವೆ. ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಯೋಗದಿಂದ ಬಹಳ ಅಚ್ಚುಕಟ್ಟಾಗಿ ಕ್ರೀಡಾಕೂಟ ನಡೆದಿದೆ. ಭಾಗಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆಗಳು. ನಿಮ್ಮ ಸಾಧನೆ ನಿರಂತರವಾಗಿರಲಿ ಎಂದು ಶುಭ ಕೋರಿದರು.

ಡಿಡಿಪಿಐ ರಾಮಚಂದ್ರರಾಜೇ ಅರಸು ಅವರು ಮಾತನಾಡಿ, ವಿಭಾಗೀಯ ಮಟ್ಟದ ಕ್ರೀಡಾಕೂಟ ಎರಡು ದಿನಗಳ ಕಾಲ ಬಹಳ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಎಲ್ಲರನ್ನು ಅಭಿನಂದಿಸಿದರು. ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರ ಸಹಕಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಜೆಎಸ್‍ಎಸ್ ಕಾಲೇಜಿನ ಪ್ರಾಂಶುಪಾಲ ಜಿ.ಸಿದ್ದರಾಜು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್. ಶಂಕರ್, ಬಿಇಓ ಡಿ. ಸೋಮಣ್ಣೇಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮೋಹನ್‍ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಮಾದಪ್ಪ, ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ರಾಮಸ್ವಾಮಿ, ಪ್ರೌಢಶಾಲಾ ಶಿಕ್ಷಣ ಸಂಘದ ಕಾರ್ಯಧರ್ಶಿ ಕಿರಣ್‍ರಾಜ್, ಸಹಕ ಕಾರ್ಯದರ್ಶಿ ಮಲ್ಲೇಶ್, ತಾಲೂಕು ಕಾರ್ಯದರ್ಶಿ ನೇಮಿರಾಜ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ತಗೂಡರಯ್ಯ, ರಾಜ್ಯ ಪರಿಷತ್ ಸದಸ್ಯ ಮಲ್ಲಶೆಟ್ಟಿ, ಮುರುಗೇಶ್, ಮಹದೇವಸ್ವಾಮಿ, ಮಹದೇವಯ್ಯ, ಮಲ್ಲನಾಯಕ ಮೊದಲಾದವರು ಇದ್ದರು.

14 ವರ್ಷದೊಳಗೆ ಬಾಲಕ ವಿಭಾಗದಲ್ಲಿ ಮಂಡ್ಯ ಪ್ರಥಮ, ಉಡುಪಿ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಪ್ರಥಮ , ಚಿಕ್ಕಮಗಳೂರು ದ್ವೀತಿಯ ಸ್ಥಾನ ಪಡೆದುಕೊಂಡಿದೆ.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ಪ್ರಥಮ, ಮಂಡ್ಯ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಹಾಸನ ಪ್ರಥಮ, ಮೈಸೂರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಬಾಲ್‍ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *