ಚಾಮರಾಜನಗರ: ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಪ್ರಶಸ್ತಿ ಬರಲಿ, ಬರದಿರಲಿ ಎಲ್ಲರೂ ಭಾಗವಹಿಸಬೇಕು. ಇತರರಲ್ಲಿ ಸ್ಪೂರ್ತಿ, ಆತ್ಮಸ್ಥೈರ್ಯ ತುಂಬಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಭಿಪ್ರಾಯಪಟ್ಟರು.
”
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಸ್ಥಳೀಯ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ದೃಷ್ಠಿದೋಷ ಸೇರಿದಂತೆ 21 ಬಗೆಯ ವಿಕಲಚೇತನರಿದ್ದು, ಕಣ್ಣಿಗೆ ಕಾಣುವ ಅಥವಾ ಕಾಣದಿರುವ ಅಂಗವಿಕಲತೆಯು ಇರಬಹುದು. ಎಲ್ಲರಿಗೂ ಸಮಸ್ಯೆ ಇದ್ದೆ ಇರುತ್ತದೆ. ಸಮಸ್ಯೆಯನ್ನು ಬದಿಗಿಟ್ಟು ಮುಂದೆ ಸಾಗಬೇಕು ಎಂದರು.
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಬಹುದು. ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕು. ಶಾಲಾ ಪಠ್ಯಗಳ ಜೊತೆಗೆ ಕ್ರೀಡೆಯಲ್ಲಿಯೂ ಉನ್ನತ ಸ್ಥಾನ ಪಡೆಯುವತ್ತ ಗಮನಹರಿಸಬೇಕು. ಅಲ್ಲದೆ ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮೀ ಅವರು ಮಾತನಾಡಿ ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡ್ಡಾಯ ಮತದಾನದ ಜಾಗ್ರತಿ ಮೂಡಿಸಲು ಸ್ವೀಪ್ ಕಾರ್ಯಕ್ರಮವನ್ನು ಕ್ರೀಡಾಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಚುನಾವಣೆಯಲ್ಲಿ 18 ವರ್ಷ ತುಂಬಿದ ಅರ್ಹ ವಿಕಲಚೇತನರೆಲ್ಲರು ತಪ್ಪದೆ ಮತದಾನ ಮಾಡಬೇಕು. ಇದಕ್ಕಾಗಿ ಮತದಾರರ ಪಟ್ಟಿಗೆ ನೊಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ವೇದಿಕೆಯ ಮುಂಭಾಗದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕಪ್ಪು ಹಲಗೆ (ಬ್ಲಾಕ್ ಬೋರ್ಡ್) ಯಲ್ಲಿ ಚಿತ್ರಿಸಿದ್ದ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಲನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ನಗರಸಭೆ ಪೌರಾಯುಕ್ತರಾದ ರಾಮದಾಸ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಿನೇಶ್, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಮೇಶ್, ಸಿದ್ದಯ್ಯ, ಕೃಷ್ಣಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಹೊರಟ ಕ್ರೀಡಾಜ್ಯೋತಿ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮೀ ಅವರು ಚಾಲನೆ ನೀಡಿದರು. ಕ್ರೀಡಾಜ್ಯೋತಿ ಮರೆವಣಿಗೆ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತು.