ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ 69ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ನಗರದ ಶ್ರೀ ಚಾಮರಾಜೆಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಈಶ್ವರಿಯ ಮ್ಯೂಸಿಕಲ್ ಅಂಡ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ಶಾಸಕ ಪುಟ್ಟರಂಗಶೆಟ್ಟಿ ಅವರು ನಾಲ್ಕು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಚಿವರಾಗಿ,ನಿಗಮ ಮಂಡಳಿ ಅಧ್ಯಕ್ಷರಾಗಿ ಪಟ್ಟಣದ ಅಭಿವೃದ್ದಿ, ಶ್ರೀ ಚಾಮರಾಜೇಶ್ವರ ದೇವಸ್ಥಾನದ ಅಭಿವೃದ್ದಿ ಸೇರಿದಂತೆ ಚಾಮರಾಜನಗರ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರದಿಂದ ವಿಶೇಷ ಅನುದಾನಗಳನ್ನು ತಂದು ಅಭಿವೃದ್ದಿಪಡಿಸುತ್ತಿದ್ದಾರೆ. ಹಾಗೂ ದೇವಾಲಯ, ಬಹಳಷ್ಟು ಕೆಲಸ ಮಾಡಿ ಜನಾನುರಾಗಿಯಾಗಿದ್ದಾರೆ.
ಹೀಗಾಗಿ ಕ್ಷೇತ್ರದ ಜನರು 4ನೇ ಬಾರಿಗೆ ಗೆಲ್ಲಿಸಿ ಕ್ಷೇತ್ರದ ಅಭಿವೃದ್ದಿಗೆ ಮತದಾರರು ಮುನ್ನುಡಿ ಬರೆದಿದ್ದಾರೆ.ಅವರ ಜನ್ಮದಿನದಂದು ದೇವರು ಅವರಿಗೆ ಮತ್ತಷ್ಟು ಆಯಸ್ಸು,ಆರೋಗ್ಯ ಕರುಣಿಸಲಿ ಎಂದು ಶುಭ ಹಾರೈಸಿ ಗಿಡ ನೆಟ್ಟು ಆಚರಿಸಲಾಗಿದೆ ಎಂದರು.
ಈಶ್ವರಿಯ ಮ್ಯೂಸಿಕಲ್ ಅಂಡ್ ಟ್ರಸ್ಟ್ ಅಧ್ಯಕ್ಷ ಹಾಗೂ ಪರಿಸರಪ್ರೇಮಿ ವೆಂಕಟೇಶ್ ಮಾತನಾಡಿ ಶಾಸಕ ಪುಟ್ಟರಂಗಶೆಟ್ಟಿ ಅವರು ಎಲ್ಲಾ ವರ್ಗದವರ ವಿಶ್ವಾಸ ಗಳಿಸಿ ಅಭಿವೃದ್ದಿಯೇ ಮೂಲಮಂತ್ರ ಎಂಬ ಧ್ಯೇಯದಡಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾ ಜನಸೇವಕರಾಗಿ ಮನೆಮಾತಾಗಿದ್ದಾರೆ.ಅವರಿಗೆ ಭಗವಂತ ಮತ್ತಷ್ಟು ಶಕ್ತಿ,ಸಾಮಥ್ರ್ಯ ಕರುಣಿಸಲು ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಚಳವಳಿ ಹೋರಾಟಗಾರ ಶಾ.ಮುರುಳಿ, ಶ್ರೀನಿವಾಸಗೌಡ,ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ನಸ್ರುಲ್ಲಾ ಖಾನ್,ಪುರುಷೋತ್ತಮ್,ಪಣ್ಯದಹುಂಡಿ ರಾಜು, ಪ್ರಕಾಶ್ ಸೇರಿದಂತೆ ಇತರರು ಇದ್ದರು.