ಚಾಮರಾಜನಗರ: ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಹಾಗೂ ಮಾರಾಟಗಾರರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾವರ್ಜನಿಕರಿಗೆ ಅರಿವು ಅವಶ್ಯಕವಾಗಿದ್ದು, ತಂಬಾಕು ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಬೀದಿ ನಾಟಕಗಳು, ಶಾಲಾ ಮಕ್ಕಳಿಂದ ಪ್ರಬಂಧ ಸ್ಪರ್ಧೆಗಳು, ಭಿತ್ತಿ ಪತ್ರಗಳ ಮೂಲಕ ಎಲ್ಲರಿಗೂ ಅರಿವು ಮೂಡಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಂಬಾಕು ಸೇವನೆಯಿಂದ ಭವಿಷ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ತಂಬಾಕು ಸೇವನೆ ಬಿಡಿಸುವ ಜಾಗೃತಿ ಶಿಬಿರಗಳನ್ನು ಆಯೋಜಿಸಬೇಕು. ತಂಬಾಕು ನಿಯಂತ್ರಣ ಕಾರ್ಯಾಗಾರಗಳನ್ನು ಕೂಡ ಹಮ್ಮಿಕೊಳ್ಳಬೇಕು. ತಂಬಾಕು ಸೇವನೆಯಿಂದ ಮೃತಪಟ್ಟವರ ಕುಟುಂಬದ ವರದಿ ಸಿದ್ದಪಡಿಸಬೇಕು. ತಾಲೂಕುಮಟ್ಟದಲ್ಲಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ತಂಬಾಕು ವ್ಯಸನಿಗಳನ್ನು ಗುರುತಿಸಬೇಕು. ಐ ರಿಸ್ಕ್ ಗ್ರೂಪ್ ಪತ್ತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಬಾಕು ಸೇವನೆಯು ಆರೋಗ್ಯದ ಮೇಲೆ ಬೀರುವ ಗಂಭೀರ ಪರಿಣಾಮಗಳನ್ನು ತಿಳಿಸಬೇಕು. ಗ್ರಾಮಗಳಲ್ಲಿ ಹೆಚ್ಚು ಮದ್ಯಪಾನ ಹಾಗೂ ಧೂಮಪಾನಗಳಿಗೆ ದಾಸರಾಗಿರುವವರ ಮಾಹಿತಿ ಪಡೆದುಕೊಳ್ಳಬೇಕು. ಶಾಲಾ ಸುತ್ತಲೂ ತಂಬಾಕು ನಿಷೇಧ ವಲಯ ಎಂದು ಗುರುತಿಸಬೇಕು. ಯುವಕರು ಹಲವಾರು ರೀತಿಯ ತಂಬಾಕು ಸೇವನೆಯಲ್ಲಿ ತೊಡಗುವುದನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ ದಂಡ ವಿಧಿಸಬೇಕು. ದಂಡದ ಪ್ರಮಾಣವನ್ನು ಹೆಚ್ಚಿಸಬೇಕು. ತಂಬಾಕು ಮಾರುವವರು ಹಾಗೂ ಅಪ್ರಾಪ್ತರು ತಂಬಾಕು ಸೇವಿಸುವವರಿಗೆ ಹೆಚ್ಚು ದಂಡ ವಿಧಿಸಬೇಕು. ಪದೇ ಪದೇ ತಂಬಾಕು ಸೇವಿಸುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ತಂಬಾಕು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದರು.
ತಾಲೂಕುವಾರು ತಂಬಾಕು ಸೇವನೆಯಿಂದ ಆಗುವ ನೋವುಗಳ ಸಂಪೂರ್ಣ ಜಾಹೀರಾತು ಪ್ರದರ್ಶಿಸಬೇಕು. ಸರ್ಕಾರಿ ಕಚೇರಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಸೇವಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿ ಪೊಟ್ಟಣ, ಲೈಟರ್ ಧೂಮಪಾನಕ್ಕೆ ಪ್ರೇರೇಪಿಸುವ ವಸ್ತುಗಳನ್ನು ಇಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೋಡೆಲ್ ಅಧಿಕಾರಿ ಡಾ. ಮಹೇಶ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಾಜೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ವಿವಿಧ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.