ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ, ನವಜಾತ ಶಿಶು ಸಪ್ತಾಹ ಹಾಗೂ ನಿಮೋನಿಯಾ ತಡೆಗಟ್ಟುವ ಅರಿವು ಕುರಿತು ಜಿಲ್ಲಾ ಮಟ್ಟದ ಕಾರ್ಯಕ್ರಮ ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿಂದು ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಲುಷಿತ ನೀರಿನಿಂದ ಅತಿಸಾರ ಬೇದಿ ಉಂಟಾಗುತ್ತದೆ. ತೀವ್ರತರ ಅತಿಸಾರ ಬೇದಿಯಿಂದ ಬಳಲುತ್ತಿರುವ ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದ ಮಕ್ಕಳಿಗೆ ಒ.ಆರ್.ಎಸ್ ಪ್ಯಾಕೆಟ್ ಮತ್ತು ಜಿಂಕ್ ಮಾತ್ರೆಯನ್ನು ನೀಡಿ ತೀವ್ರತರ ಅತಿಸಾರ ಬೇದಿಯನ್ನು ತಡೆಗಟ್ಟಿ ಕಾಯಿಲೆಗಳು ಬಾರದ ಹಾಗೆ ನೋಡಿಕೊಳ್ಳುವುದು ಅತಿ ಮುಖ್ಯ. ಅತಿಸಾರ ಬೇದಿಯಿಂದ ಲವಣಾಂಶಗಳು ಶರೀರದಿಂದ ಹೊರಹೊಗಿ ದೇಹ ನಿತ್ರಾಣ ಸ್ಥಿತಿಯನ್ನು ತಲುಪುತ್ತದೆ. ಆಗ ಸುಸ್ತು, ನೀರಡಿಕೆಯಾಗುತ್ತದೆ ಎಂದರು.
ವಿಶೇಷವಾಗಿ ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಬೇದಿ ಹೆಚ್ಚಾಗಿ ಉಂಟಾಗುತ್ತದೆ. ಚಿಕ್ಕ ವಯಸ್ಸಿನಿಂದ ಮಕ್ಕಳಲ್ಲಿ ಸೋಪಿನಿಂದ ಕನಿಷ್ಠ 30 ಸೆಕೆಂಡಿನಲ್ಲಿ ನೀರಿನಲ್ಲಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಮಕ್ಕಳಿಗೆ ಹೊರಗಡೆ ದೊರಕುವ ಆಹಾರ ಕೊಡಿಸಬಾರದು. ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಮತ್ತು ನೀರನ್ನು ನೀಡಬೇಕು. ವಾತಾವರಣದ ಬದಲಾವಣೆಯಿಂದ ಮಕ್ಕಳಲ್ಲಿ ಕೆಮ್ಮು, ನೆಗಡಿ, ಜ್ವರ ಬರುವ ಸಾಧ್ಯತೆ ಇದ್ದು, ಮುಂದೆ ನ್ಯುಮೋನಿಯ ಕಾಯಿಲೆಗೆ ತಿರುಗುತ್ತದೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಡಾ. ಚಿದಂಬರ ಅವರು ತಿಳಿಸಿದರು.
ಆರಂಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಂ. ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಸಾರ ಬೇದಿಯಿಂದ ಮಕ್ಕಳು ನರಳುತ್ತಿದ್ದು, ಇದರಿಂದ ಶಿಶು ಮರಣ ಉಂಟಾಗುವ ಸಾಧ್ಯತೆ ಇರುತ್ತದೆ. ತಾಯಿ ಮರಣ ಮತ್ತು ಶಿಶು ಮರಣ ತಡೆಗಟ್ಟುವುದು ಸರ್ಕಾರದ ಮುಖ್ಯ ಉದೇಶವಾಗಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಒ.ಆರ್.ಎಸ್ ಪ್ಯಾಕೆಟ್ ಮತ್ತು ಜಿಂಕ್ ಮಾತ್ರೆಯನ್ನು ನೀಡಿ ಶಿಶು ಮರಣವನ್ನು ತಡೆಗಟ್ಟಬಹುದು. ಜಿಂಕ್ ಮಾತ್ರೆಯು ಮಕ್ಕಳ ಕರುಳಿನ ಸೋಂಕಿನಿಂದ ಉಂಟಾಗುವ ಕರುಳಿನ ತೊಂದರೆಯನ್ನು ತಡೆಗಟ್ಟುತ್ತದೆ. ಇದನ್ನು 14 ದಿನಗಳ ಕಾಲ ಒ.ಆರ್.ಎಸ್ ಪ್ಯಾಕೆಟ್ ಜೊತೆ ನೀಡಬೇಕು. ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶು ಮತ್ತು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಘೋಷಣೆ ಅತಿಸಾರ ಬೇದಿಯ ಶೂನ್ಯ ಬಾಲ್ಯದ ಸಾವುಗಳ ಕಡೆಗೆ ತೀವ್ರ ಪ್ರಯತ್ನ, ಎಸ್.ಎ.ಎನ್.ಎನ್.ಎಸ್ ಘೋಷಣೆ ನ್ಯುಮೊನಿಯಾ ತೊಲಗಿಸಿ ಆರೋಗ್ಯವಂತ ಬಾಲ್ಯ ಒದಗಿಸಿ ಹಾಗೂ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಘೋಷಣೆ ಸಮುದಾಯ ಸೌಲಭ್ಯ ತೊಡಗಿಸಿಕೊಳ್ಳುವಿಕೆಯ ಮೂಲಕ ನವಜಾತ ಜೀವನವನ್ನು ಪೆÇೀಷಿಸುವುದು ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಆಚರಣೆ ನಡೆಯಿತು.
ಇದೇ ವೇಳೆ ಅತಿಸಾರ ಭೇದಿ ಪಾಕ್ಷಿಕದ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು. ಒ.ಆರ್.ಎಸ್ ದ್ರಾವಣ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತಾಯಂದಿಯರಿಗೆ ನೀಡಲಾಯಿತು,
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮಾರಾಣಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದುಶ್ಯಂತ್, ಜಿಲ್ಲಾ ಶುಶ್ರೂಷಣಾಧಿಕಾರಿ ಶಾಂತಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮೀನಾಕ್ಷಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಪ್ರಸಾದ್, ವ್ಯವಸ್ಥಾಪಕರಾದ ರಶ್ಮಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.