ಮೃತ ರಮೇಶ್ ಮನೆಗೆ ಡಾ. ಮೋಹನ್ ಭೇಟಿ: ಕುಟುಂಬದವರಿಗೆ ಸಾಂತ್ವನ
ಚಾಮರಾಜನಗರ: ದಲಿತ ಯುವಕ ದಡದಹಳ್ಳಿ ರಮೇಶ್ ಅವರ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಗುರಿಪಡಿಸಿ, ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. ಮೃತ ಪತ್ನಿ ಹಾಗೂ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಡಾ. ಎನ್.ಎಸ್.ಮೋಹನ್ ಒತ್ತಾಯಿಸಿದರು.
ತಾಲೂಕಿನ ದಡದಹಳ್ಳಿ ಗ್ರಾಮದ ಮೃತ ರಮೇಶ್ ಮನೆಗೆ ಇಂದು ಭೇಟಿ ನೀಡಿ, ಆತನ ಪತ್ನಿ ಪ್ರತಿಮಾ ಹಾಗು ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಪರಿಹಾರ ನೀಡಿ ಅವರು ಮಾತನಾಡಿದರು.
ದಲಿತ ಯುವಕ ರಮೇಶ್ ಆ.30 ರಂದು ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಎಂದು ಬಿಂಬಿಸಲಾಗಿದೆ. ಪೊಲೀಸ್ ಠಾಣೆಯಲ್ಲಿಯು ಸಹ ಅದೇ ರೀತಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆದರೆ, ವಿಡಿಯೋಗಳನ್ನು ನೋಡಿದರೆ, ಇದು ಅಪಘಾತವಲ್ಲ. ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂಬ ಭಾವನೆ ಮೂಡುತ್ತಿದೆ. ಇದೊಂದು ಅಮಾನವೀಯ ಘಟನೆಯಾಗಿದೆ. ಪೊಲೀಸರು ಸಹ ಎಲ್ಲಾ ಅಯಾಮಗಳಲ್ಲಿ ತನಿಖೆ ನಡೆಸಬೇಕು.
ನಾನು ಒಬ್ಬ ವೈದ್ಯನಾಗಿ ಹಾಗೂ ಬೆಂಗಳೂರಿನ ಡಾ.ಸಂಜಯ್ಗಾಂಧಿ ಅಸ್ಪತ್ರೆಯಲ್ಲಿ ಅಪಘಾತ ವಿಭಾಗದಲ್ಲಿ ಮುಖ್ಯಸ್ಥನಾಗಿ ಅನೇಕ ಪ್ರಕರಣಗಳನ್ನು ನೋಡಿದ್ದೇನೆ. ಆದರೆ, ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯ ಮಾಡಿದಂತೆ ಕಾಣುತ್ತಿದೆ. ಅಲ್ಲದೇ ತಜ್ಞ ವೈದ್ಯರ ಶಿಫಾರಸ್ಸು ಮತ್ತು ಮೆಡಿಕಲ್ ವರದಿಗಳನ್ನು ಗಮನಿಸಿ, ಪ್ರಕರಣ ದಾಖಲು ಮಾಡಬೇಕು ಎಂದು ಡಾ. ಮೋಹನ್ ತಿಳಿಸಿದರು.
ಮೃತನ ರಮೇಶ್ನ ಪತ್ನಿ ಪ್ರತಿಮಾ ಅವರಿಗೆ ವೈಯಕ್ತಿಕ ಪರಿಹಾರವನ್ನು ನೀಡಿದರು.
ಈ ಸಂದರ್ಭದಲ್ಲಿ ದಡದಹಳ್ಳಿ ಗ್ರಾ.ಪಂ. ಸದಸ್ಯರಾದ ಮೂರ್ತಿ, ಶಂಕರ್, ಶಿವಣ್ಣ, ಮುಖಂಡರಾದ ಗೋವಿಂದರಾಜು, ಡಾ. ಮೋಹನ್ ಅಭಿಮಾನಿ ಬಳಗದ ಅಧ್ಯಕ್ಷ ಕುರುಬರಹುಂಡಿ ಕೆ.ಆರ್. ಲೋಕೇಶ್, ಬಳಗದ ಹಿರಿಬೇಗೂರು ಸೋಮಶೇಖರ್, ಕಾಡಹಳ್ಳಿ ಕುಮಾರ್, ಪಣ್ಯದಹುಂಡಿ ರಾಜು, ಕೆರೆಹಳ್ಳಿ ವೆಂಕಟೇಶ್, ಮೈಸೂರುಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.