ದಸರಾ : ಗಮನಸೆಳೆದ ಹಾಲು ಕರೆಯುವ ಸ್ಪರ್ಧೆ

ಚಾಮರಾಜನಗರ: ಚಾಮರಾಜನಗರ ದಸರಾ ಅಂಗವಾಗಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ವಿಶೇಷ ಗಮನಸೆಳೆಯಿತು.

ನಗರದ ಪಶು ಆಸ್ಪತ್ರೆ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಹಾಲು ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹಾಲು ಕರೆಯುವ ಸ್ಪರ್ಧೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಹಾಲು ಕರೆಯುವ ಮೂಲಕ ಚಾಲನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಹೈನುಗಾರಿಕೆಯು ವಿಶೇಷ ಸ್ಥಾನಮಾನ ಹೊಂದಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳಿಂದ ರೈತರನ್ನು ಪ್ರೋತ್ಸಾಹಿಸಬೇಕು ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರೈತ ಸ್ಪರ್ಧಿಗಳಿಗೆ ಶುಭಾಶಯ ಕೋರಿದರು.

ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಲ್. ಹನುಮೇಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಥಮವಾಗಿ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮದಿಂದ ರೈತರಿಗೆ ಹೈನುಗಾರಿಕೆಯಲ್ಲಿ ಉತ್ಸಾಹ ಹೆಚ್ಚಾಗುವುದು. ಹೀಗಾಗಿ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ಸಹ ಇಂತಹ ಸ್ಪರ್ಧೆ ಆಯೋಜಿಸುವ ಆಸಕ್ತಿ ಹೊಂದಿದ್ದೇವೆ ಎಂದರು.

ಸ್ಪರ್ಧೆಯಲ್ಲಿ 12 ವಿವಿಧ ತಳಿಗಳ ರಾಸುಗಳು ಭಾಗಿಯಾಗಿದ್ದವು. ಮೇಲಾಜಿಪುರದ ನವೀನ್ ಅವರು 13.200 ಕೆ.ಜಿ, ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಪಡೆದರು. ಕಾಗಲವಾಡಿಯ ಮುರುಗೇಶ್ 8.300 ಕೆ.ಜಿ ಹಾಲು ಕರೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡರು. ಮೂಡಲಪುರದ ಬಸವರಾಜು 7.850 ಕೆ.ಜಿ ಹಾಲು ಕರೆಯುವ ಮೂಲಕ ಮೂರನೇ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರೈತರಿಗೆ ಪ್ರಮಾಣ ಪತ್ರ ಹಾಗೂ ರಾಸುಗಳಿಗೆ ಪೌಷ್ಠಿಕ ಪೌಡರ್ ನೀಡಿದರು.

ಪಶು ವೈದ್ಯಾಧಿಕಾರಿಗಳಾದ ಡಾ. ಶಿವಣ್ಣ, ಗುಂಡ್ಲುಪೇಟೆಯ ಡಾ. ಮೋಹನ್ ಕುಮಾರ್, ಕೊಳ್ಳೇಗಾಲ ತಾಲೂಕಿನ ಡಾ. ಮುತ್ತುರಾಜ್, ಹನೂರು ತಾಲೂಕಿನ ಡಾ. ಸಿದ್ದರಾಜು, ಯಳಂದೂರು ತಾಲೂಕಿನ ಡಾ. ಶಿವರಾಜ್ ಇದ್ದರು.

Leave a Reply

Your email address will not be published. Required fields are marked *