ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತತ್ವದಲ್ಲಿಯಲ್ಲಿ ಕಾಯಕ : ಪುಟ್ಟರಂಗಶೆಟ್ಟಿ ಆಶಯ

ಮಹಾಮನೆಯಲ್ಲಿ ಶಾಸಕರಿಗೆ ಗೌರವ ಸನ್ಮಾನ
ಚಾಮರಾಜನಗರ: ಜಗಜ್ಯೋತಿ ಬಸವೇಶ್ವರರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಅದರ್ಶಗಳನ್ನಿಟ್ಟುಕೊಂಡು ಕಾಯಕದಲ್ಲಿ ನಂಬಿಕೆಯನ್ನು ಹೊಂದಿದ್ದರಿಂದ ಕ್ಷೇತ್ರದ ಜನರು ಸತತ ನಾಲ್ಕನೇ ಬಾರಿಗೆ ನನಗೆ ಜಯ ತಂದು ಕೊಟ್ಟಿದ್ದಾರೆ ಎಂದು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಮಹಾಮನೆಯಲ್ಲಿ ವೀರಶೈವ ಲಿಂಗಾಯತ ನೌಕರರ ಸ್ನೇಹ ಬಳಗದ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮವನ್ನು ಉದ್ಗಾಟಿಸಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದೇನೆ. ನೊಂದವರು, ದೀನ ದಲಿತರು ಮತ್ತು ಬಡವರಿಗೆ ಸವಲತ್ತು ಕಲ್ಪಿಸುವ ಮೂಲಕ ಅವರ ಸಂಕಷ್ಟಗಳಿಗೆ ನೆರವು ನೀಡಿದ್ದೇನೆ. ಹೀಗಾಗಿ ಯಾರೇ ಸ್ಪರ್ಧೆ ಮಾಡಿದರು ಕ್ಷೇತ್ರದ ಎಲ್ಲಾ ವರ್ಗದ ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ್ದಾರೆ. ಅವರ ಚಿರಋಣಿ ಎಂದರು.

ರಾಜ್ಯ ಸಭಾ ಸದಸ್ಯರಾಗಿದ್ದ ದಿ. ರಾಜಶೇಖರಮೂರ್ತಿ ಅವರು ನನ್ನ ಗುರುಗಳು. ನಾನು ಮೈಸೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಲು ಸಹಕಾರ ಸಂಘಗಳ ನಿರ್ದೇಶಕನಾಗಿ, ಗ್ರಾ.ಪಂ. ಸದಸ್ಯನಾಗಿ ರಾಜಶೇಖರಮೂರ್ತಿ ಅವರ ಮೆಚ್ಚಿನ ಶಿಷ್ಯನಾಗಿದ್ದೆ. ಅವರು ಕಾಂಗ್ರೆಸ್ ಬಿಡುವ ವೇಳೆಯಲ್ಲಿ ನನ್ನನ್ನು ಮನೆಗೆ ಕರೆದು ಪಕ್ಷ ಬಿಡುತ್ತೇನೆ. ನೀನು ನನ್ನ ಜೊತೆ ಬಾ ಎಂಎಲ್‌ಎ ಮಾಡುತ್ತೇನೆ ಎಂದು ಅಂದೇ ಹೇಳಿದ್ದರು. ಆದರೆ, ನಾನು ಕಾಂಗ್ರೆಸ್‌ನಲ್ಲಿ ಉಳಿಯುವುದಾಗಿ ವಿನಯವಾಗಿ ಹೇಳಿ ಬಂದೆ. ಅದರೂ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಅವರ ಗರಡಿಯಲ್ಲಿ ಬೆಳೆದವನು ನಾನು. ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸವನ್ನು ಹೊಂದಿ. ಎಲ್ಲಿಯೂ ಸಹ ಕಪ್ಪು ಚುಕ್ಕೆ ಬರದಂತೆ ಕ್ಷೇತ್ರದ ಅಭಿವೃದ್ದಿಗೆ ದುಡಿಯುತ್ತಿದ್ದೇನೆ ಎಂದರು.

ಮಾಜಿ ಸಚಿವರಾದ ವಿ. ಸೋಮಣ್ಣ ನನ್ನ ಅತ್ಮೀಯ ಸ್ನೇಹಿತರು. ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿದ್ದಾಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೇನೆ. ಅವರೊಂದಿಗೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ನನ್ನ ವಿರುದ್ದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಅದರೂ ಯಾವುದೂ ಕಾರಣಗಳಿಂದ ಚಾ.ನಗರಕ್ಕೆ ಬರಬೇಕಾಯಿತು ಎಂದು ಪುಟ್ಟರಂಗಶೆಟ್ಟಿ ಸೋಮಣ್ಣ ಅವರನ್ನು ಸಹ ಗುಣಗಾನ ಮಾಡಿದರು.

ಚಾಮರಾಜನಗರ ಕ್ಷೇತ್ರದ ಶಾಸಕನಾಗಿ ೧೫ ವರ್ಷಗಳು ಕಳೆದಿರಬಹುವುದು. ಆದರೆ, ಅದಕ್ಕಿಂತ ಮುಂಚೆಯು ನನಗೆ ಚಾಮರಾಜನಗರ ಜನರ ಒಡನಾಟ ಇತ್ತು. ಕರಿಕಲ್ಲು ಕ್ವಾರೆ, ಜಿಲ್ಲಾ ಸಹಕಾರ ಒಕ್ಕೂಟ, ಎಪಿಎಂಸಿ ನಿರ್ದೇಶಕನಾಗಿ, ಕ್ಷೇತ್ರದ ಜನರ ವಿಶ್ವಾಸವನ್ನು ಹೊಂದಿದ್ದೆ. ವೀರಶೈವ ಲಿಂಗಾಯತ ನೌಕರರು ಸನ್ಮಾನ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿದೆ. ಕ್ಷೇತ್ರದ ಅಭಿವೃದ್ದಿಯಲ್ಲಿ ತಮ್ಮ ಸಲಹೆ ,ಸಹಕಾರವನ್ನು ನೀಡುವ ಮೂಲಕ ಎಲ್ಲರು ಒಗ್ಗಟ್ಟಿನಿಂದ ದುಡಿಯೋಣ ಎಂದರು.

ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕ ಸಿ. ಪುಟ್ಟರಂಗಶೆಟ್ಟರ ಸರಳ, ಸಜ್ಜನಿಕೆ ವಿಶ್ವಾಸ ಪೂರಕವಾದ ನಡೆ ನುಡಿಗಳು ಅವರನ್ನು ನಾಲ್ಕನೇ ಬಾರಿಯು ಶಾಸಕರನ್ನಾಗಿ ಕ್ಷೇತ್ರದ ಜನರು ಪ್ರೀತಿ ಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ. ಅವರು ಯಾವುದೇ ಜಾತಿ ಪರವಾಗಿ ಕೆಲಸ ಮಾಡಿದವರಲ್ಲ. ಎಲ್ಲರಲ್ಲೂ ವಿಶ್ವಾಸವನ್ನು ಹೊಂದಿ ಸಹಬಾಳ್ವೆಯಿಂದ ಬದುಕುವಂತೆ ನೀತಿ ಪಾಠ ಹೇಳುವಂತವರು. ಕಳೆದ ೧೫ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಜಾತಿ ಗಲಭೆಯಾಗಿಲ್ಲ. ಹೀಗಾಗಿ ಅವರನ್ನು ಎಲ್ಲಾ ವರ್ಗದ ಜನರು ಇಷ್ಟ ಪಡುತ್ತಾರೆ. ಮುಂದಿನ ದಿನಗಳಲ್ಲಿ ಸಚಿವರು ಸಹ ಆಗಲಿದ್ದಾರೆ ಎಂದರು.

ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್ ಮಾತನಾಡಿ, ಶಾಸಕ ಪುಟ್ಟರಂಗಶೆಟ್ಟರು ಜಾತ್ಯತೀತ ವ್ಯಕ್ತಿಯಾಗಿದ್ದು. ಎಲ್ಲರನ್ನು ರಾಜಕೀಯವಾಗಿ ಬೆಳೆಸುವ ಗುಣ ಅವರದಲ್ಲಿದೆ. ನನ್ನಂಥ ಅನೇಕ ನಾಯಕರನ್ನು ಬೆಳೆಸಿದ್ದಾರೆ. ಎಪಿಎಂಸಿ ನಿರ್ದೇಶಕನಾಗಲು ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಲು ಅವರಲ್ಲಿರುವ ಜನ ಬೆಂಬಲವೇ ಕಾರಣವಾಗಿದೆ. ಹೀಗಾಗಿ ಸಮಾಜದ ಬಂಧುಗಳು ಕ್ಷೇತ್ರದ ಶಾಸಕರ ಮೇಲೆ ವಿಶ್ವಾಸವಿಟ್ಟು ಅಭಿವೃದ್ದಿಪರವಾಗಿ ಅವರೊಂದಿಗೆ ಕೈಜೋಡಿಸೋಣ. ಅವರಿಗೆ ಇನ್ನು ಹೆಚ್ಚಿನ ಅಧಿಕಾರ ಲಭಿಸಿದರೆ, ಸಮಾಜದ ಅಭಿವೃದ್ದಿಗಾಗಿ ಅವರಿಂದಲು ಸಹ ನೆರವು ಪಡೆದುಕೊಂಡು ಅಭಿವೃದ್ದಿಯತ್ತ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘದ ನಿಕಟಪುರ್ವ ಅಧ್ಯಕ್ಷ ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ, ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಉಪಾಧ್ಯಕ್ಷ ಹರವೆ ಮಂಜು, ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಸ್ನೇಹ ಬಳಗದ ಅಧ್ಯಕ್ಷ ಉಡಿಗಾಲ ಮಹೇಶ್, ಕಾಗಲವಾಡಿ ಬಸವಣ್ಣ, ಕಿರಣ್‌ರಾಜು, ಯೋಗೇಶ್, ಹಾಗೂ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

Leave a Reply

Your email address will not be published. Required fields are marked *