ಮೋಸ ಹೋಗಿದ್ದೇವೆ ಎಂಬ ಭಾವನೆ ಜನರಲ್ಲಿದೆ : ಬಿವೈವಿ

ಚಾಮರಾಜನಗರ: ಒಬ್ಬ ಅನುಭವಿ ಮುಖ್ಯಮಂತ್ರಿ ಹಾಗೂ 14 ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ನೀರಿಕ್ಷೆ ಇಟ್ಟಿದ್ದ ಜನರ ನಿರೀಕ್ಷೆಗಳು ಹುಸಿಯಾಗಿದ್ದು, ನಾವು ಮೋಸ ಹೋಗಿದ್ದೇವೆ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ ಅವರು, ಗ್ಯಾರೆಂಟಿಗಳನ್ನ ಅರೆಬರೆ ಘೋಷಣೆ ಮಾಡಿದ್ದು ಎಷ್ಟು ಜನರಿಗೆ ತಲುಪಿದೆಯೋ ಗೊತ್ತಿಲ್ಲ. ಸರ್ಕಾರದ ನಡವಳಿಕೆಯಿಂದ ರೈತರು ಹತಾಶರಾಗಿದ್ದಾರೆ. ಎಸ್ಸಿಪಿಟಿಎಸ್‍ಪಿ ಯೋಜನೆಗಳಿಂದ 11500 ಕೋಟಿ ರೂ. ಹಣವನ್ನ ಬೇರೆಡೆಗೆ ವರ್ಗ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ದಲಿತ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ಹೊಸ ಯೋಜನೆ ಜಾರಿ ತರುತ್ತಿಲ್ಲ. ಯಾವೊಬ್ಬ ಶಾಸಕನು ಕೂಡ ಸ್ವಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗಿಲ್ಲ. ರಸ್ತೆ ಅಭಿವೃದ್ಧಿಯಾಗುತ್ತಿಲ್ಲ. ಆಸ್ಪತ್ರೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ದುಷ್ಟ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ. ವಿಧಾನಸಭಾ ಚುನಾವಣೆ ಸೋಲಿಗೆ ಸಾಕಷ್ಟು ಕಾರಣಗಳಿದೆ. ಸಂಪೂರ್ಣ ಶ್ರಮ ಹಾಕಬೇಕಿತ್ತು. ಅದು ಕೊರತೆಯಾಯ್ತು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸೋಮಣ್ಣ, ಯತ್ನಾಳ್ ಅವರ ವಿಚಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವುದಿಲ್ಲ. ಸಾಕಷ್ಟು ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಸೋಮಣ್ಣ ಅವರ ಚುನಾವಣೆ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸೋಮಣ್ಣ ಹಿರಿಯರು ಅವರ ಕೊಡುಗೆ ಪಕ್ಷಕ್ಕೆ ಇದೆ. ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಆದರೆ, ಸೋಲಾಗಿದೆ. ಇದಕ್ಕೆ ಬೇರೆ ಬೇರೆ ಕಾರಣ ಇದೆ. ಸೋಮಣ್ಣ ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ಮಾಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಶಾಸಕ ನಿರಂಜನ್‍ಕುಮಾರ್, ಎಸ್.ಬಾಲರಾಜ್, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ರಾಜೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಪ್ರೀತಂಗೌಡ, ರಘು ಕೌಟಿಲ್ಯ, ಎನ್.ಮಹೇಶ್ ಇತರರಿದ್ದರು.

ಭರ್ಜರಿ ರೋಡ್ ಶೋ: ರಾಜ್ಯಾಧ್ಯಕ್ಷರಾದ ಬಳಿಕ ಚಾಮರಾಜನಗರಕ್ಕೆ ಇದೇ ಮೊದಲ ಬಾರಿಗೆ ಬಿ ವೈ ವಿಜಯೇಂದ್ರ ಭೇಟಿ ನೀಡಿದ್ದು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಸಂತೇಮರಹಳ್ಳಿ ವೃತ್ತಕ್ಕೆ ವಿಜಯೇಂದ್ರ ಆಗಮಿಸಿದ ವೇಳೆ ಬೃಹತ್ ಹೂವಿನ ಹಾಗೂ ಸೇಬಿನ ಹಾರವನ್ನು ಹಾಕಲಾಯಿತು. ಬಳಿಕ, ಮಹರ್ಷಿ ವಾಲ್ಮೀಕಿ ಮತ್ತು ಪ್ರಭು ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಬಿವೈವಿ ಪುಷ್ಪಾರ್ಚನೆ ಸಲ್ಲಿಸಿದರು. ಸಂತೇಮರಹಳ್ಳಿ ವೃತ್ತದಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

Leave a Reply

Your email address will not be published. Required fields are marked *