ರೈತರು ಜಮೀನಿನ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿ ಗುರುತಿನ ಚೀಟಿ ಸಂಖ್ಯೆ ಪಡೆಯುವುದು ಅವಶ್ಯ: ಜಿಲ್ಲಾಧಿಕಾರಿ

ಚಾಮರಾಜನಗರ: ಜಿಲ್ಲೆಯಾದ್ಯಂತ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಹಾಗೂ ವಿವಿಧ ಇಲಾಖೆಗಳಲ್ಲಿನ ಸೌಲಭ್ಯಗಳನ್ನು ಪಡೆಯಲು ರೈತರ ಜಮೀನಿನ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿ ರೈತರು ಗುರುತಿನ ಚೀಟಿ ಸಂಖ್ಯೆ (ಎಫ್.ಐ.ಡಿ) ಪಡೆದುಕೊಳ್ಳುವುದು ಅವಶ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಫ್ರೂಟ್ಸ್ ತಂತ್ರಾಂಶವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮಾ ಯೋಜನೆ ಹಾಗೂ ಬೆಳೆ ಹಾನಿ ಪರಿಹಾರ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ರೈತರ ಜಮೀನಿನ ವಿವರಗಳನ್ನು ಪಡೆಯಲು ಬಳಸಲಾಗುತ್ತಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿ ಲಭ್ಯವಿರುವುದು ಅಗತ್ಯವಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 4,30,317 ಸರ್ವೆ ನಂಬರ್‍ಗಳಿದ್ದು, ಈಗಾಗಲೇ 2,30,674 ರೈತರ ಸರ್ವೆ ನಂಬರ್‍ಗಳಿಗೆ ಆಧಾರ್ ಜೋಡಣೆಯಾಗಿದೆ. ಬಾಕಿ ಉಳಿದಿರುವ 1,99,643 ಸರ್ವೆ ನಂಬರ್‍ಗಳಿಗೆ ಆಧಾರ್ ಜೋಡಣೆಯಾಗಬೇಕಿದೆ. ವಿವಿಧ ಇಲಾಖೆಗಳ ಯೋಜನೆಗಳಡಿ ಸೌಲಭ್ಯ ಪಡೆಯಲು ಈವರೆಗೆ ನೋಂದಣಿ ಮಾಡದೇ ಇರುವ ರೈತರು ಅಗತ್ಯ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ವಿವರ, ಜಾತಿ ಮತ್ತು ಆದಾಯದ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ), ಅರ್ಜಿದಾರರ ಭಾವಚಿತ್ರಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡಕಚೇರಿ, ಗ್ರಾಮ ಪಂಚಾಯಿತಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ದಾಖಲಾತಿಗಳನ್ನು ಸಲ್ಲಿಸಿ ರೈತರ ಗುರುತಿನ ಚೀಟಿ ಸಂಖ್ಯೆ (ಎಫ್.ಐ.ಡಿ)ಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ಈಗಾಗಲೇ ನೋಂದಣಿಯಾಗಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‍ಗಳು ರೈತರ ಗುರುತಿನ ಚೀಟಿ ಸಂಖ್ಯೆಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *