ವಾಹನಗಳು ಹೆಚ್ಚಿದಂತೆ ಬಂಕ್‍ಗಳ ಅವಶ್ಯಕತೆ ಇದೆ : ಗಣೇಶ್‍ಪ್ರಸಾದ್

ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದ ಹೊರ ವಲಯದಲ್ಲಿ ನೂತನವಾಗಿ ಆರಂಭವಾದ ಕೆಎಂಎನ್ ನಯರ ಪೆಟ್ರೋಲ್ ಬಂಕ್ ಅನ್ನು ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಉದ್ಘಾಟಿಸಿದರು.

ಜಿ.ಪಂ. ಮಾಜಿ ಸದಸ್ಯ ಹಾಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್ ಮಾಲೀಕತ್ವದಲ್ಲಿ ಆರಂಭವಾದ ನೂತನ ಪೆಟ್ರೋಲ್ ಬಂಕ್ ಉದ್ಘಾಟಿಸಿ, ತಮ್ಮ ವಾಹನಕ್ಕೆ ಡಿಸೇಲ್ ತುಂಬಿಸಿಕೊಳ್ಳುವ ಮೂಲಕ ಗಣೇಶ ಪ್ರಸಾದ್ ಶುಭ ಕೋರಿದರು. ಹರವೆ ಮಠಾಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ, ಮಲೆಯೂರು ಕನಕಗಿರಿ ಶ್ರೀಕ್ಷೇತ್ರದ ಪಿಠಾಧ್ಯಕ್ಷರಾದ ಶ್ರೀ ಭವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಿ ಆರ್ಶೀವಾದ ಮಾಡಿದರು.

ಬಳಿಕ ನಡೆದ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಗಣೇಶ್ ಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬಂಕ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗುತ್ತಿವೆ. ಇದಕ್ಕೆ ತಕ್ಕಂತೆ ವಾಹನಗಳು ಸಂಖ್ಯೆಯು ಹೆಚ್ಚಳವಾಗಿವೆ. ಈ ಹಿಂದೆ ಗ್ರಾಮಗಳಲ್ಲಿ ಒಂದು ಕಾರು, ಐದಾರು ಬೈಕ್‍ಗಳೂ ಇದ್ದರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಕನಿಷ್ಠ ಎರಡು ದ್ವಿಚಕ್ರ ವಾಹನಗಳು ಹಾಗೂ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಿವೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಎತ್ತಿನ ಗಾಡಿಗಳ ಬದಲು ಗೂಡ್ಸ್ ಆಟೋಗಳು, ಟ್ರಾಕ್ಟರ್‍ಗಳು ಹಾಗೂ ಆಧುನಿಕ ಕೃಷಿ ಯಂತ್ರೋಪಕರಣಗಳು ಬಳಕೆಯಾಗುತ್ತಿವೆ. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿಯು ಇಂಧನ ಅವಶ್ಯಕವಾಗಿದೆ ಎಂದರು.

ಹರವೆ ಭಾಗದಲ್ಲಿ ಮಲೆಯೂರು ಹೊರತುಪಡಿಸಿ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿ ಬಂಕ್ ಇರಲಿಲ್ಲ. ಇದನ್ನು ಮನಗಂಡು ಕೆರೆಹಳ್ಳಿ ನವೀನ್ ಅವರು ಬಹಳ ಧೈರ್ಯ ಮಾಡಿ ಹರವೆಯಲ್ಲಿ ಪೆಟ್ರೋಲ್ ಬಂಕ್ ತೆರೆದಿದ್ದಾರೆ. ಅವರು ನಿಮ್ಮೆಲ್ಲರ ಸೇವೆಗೆ ಮುಂದಾಗಿದ್ದಾರೆ. ಅವರಿಗೆ ರಾಜಕೀಯದಲ್ಲಿ ಕೊಟ್ಟ ಪ್ರೀತಿಯಂತೆ ವ್ಯಾಪಾರದಲ್ಲಿಯು ಸಹ ಪ್ರೀತಿ ವಿಶ್ವಾಸವನ್ನು ನೀಡಿ, ನಿಮ್ಮ ಹುಡುಗ ಬಂಕ್ ತೆರೆದಿದ್ದಾನೆ ಎಂದು ನಿಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳುವ ಮೂಲಕ ಅಭಿವೃದ್ದಿಗೆ ಸಹಕಾರ ನೀಡಬೇಕು. ಅದೇ ರೀತಿ ನವೀನ್ ಸಹ ಸಾಲ ನೀಡದಂತೆ ಅಂದಿನ ವ್ಯವಹಾರಗಳು ಅಂದೇ ಮುಕ್ತಾಯವಾಗುವ ಮೂಲಕ ಲೆಕ್ಕಪತ್ರಗಳನ್ನು ಸಿದ್ದಪಡಿಸಿಕೊಂಡು, ಉದ್ಯಮದಲ್ಲಿ ಯಶಸ್ಸು ಕಾಣುವಂತೆ ಗಣೇಶ್ ಪ್ರಸಾದ್ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಚಾಮುಲ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಜಿ.ಪಂ. ಮಾಜಿ ಸದಸ್ಯರಾದ ಕಬ್ಬಹಳ್ಳಿ ಮಹೇಶ್, ಅಶ್ವಿನಿ ವಿಶ್ವನಾಥ್, ಚನ್ನಪ್ಪ, ಬೊಮ್ಮಯ್ಯ, ಮಲೆಯೂರು ರೇವಣ್ಣ, ಉದಯಕುಮಾರ್,ಗುರುಮಲ್ಲಪ್ಪ, ಮುಕ್ಕಡಹಳ್ಳೀ ರವಿಕುಮಾರ್, ಹಳೇಪುರ ಗುರುಸಿದ್ದೇಗೌಡ, ಹಿರೇಬೇಗೂರು ಗುರುಸ್ವಾಮಿ, ಮಾಸ್ಟರ್ ಮಾದಪ್ಪ, ಕೆರಹಳ್ಳಿ ಕೆ.ಎಂ. ಮಹೇಶ್, ಗುರುಬಸಪ್ಪ, ಪ್ರಕಾಶ್, ರಾಜೇಂದ್ರ, ಯೋಗೀಶ್, ಬಸವಣ್ಣ, ಮಂಜುನಾಥ್ ಸೇರಿದಂತೆ ಹೋಬಳಿ ವ್ಯಾಪ್ತಿಯ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *