ಚಾಮರಾಜನಗರ: ಸಹಕಾರ ಎಂದರೆ ಪರಸ್ಪರ ಒಬ್ಬರಿಗೆ ಎಲ್ಲರು, ಎಲ್ಲರಿಗಾಗಿ ಒಬ್ಬರು ಎಂಬ ತತ್ವದಡಿಯಲ್ಲಿ ಏಳು ಬಣ್ಣಗಳನ್ನು ಹೊಂದಿರುವ ಏಕತೆಯನ್ನು ಸಾರುತ್ತದೆ ಎಂದು ಚಾಮುಲ್ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ತಾಲೂಕಿನ ಅಮಚವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಹಾಗೂ ಅಮಚವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ Àನಡೆದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮಗಳಲ್ಲಿಯು ಒಂದಾಲ್ಲ ಒಂದು ಸಹಕಾರ ಸಂಘಗಳು ರಚನೆಯಾಗಿವೆ. ರೈತರಿಗಾಗಿ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘ, ಮೀನುಗಾರರ ಸಹಕಾರ ಸಂಘ, ನೇಕಾರರ ಸಹಕಾರ ಸಂಘ, ಮಹಿಳೆಯರ ಸಹಕಾರ ಸಂಘ ಸೇರಿದಂತೆ ಸಾವಿರಾರು ಸಂಘಗಳು ಅವರ ಕಸುಬು ಮತ್ತು ವೃತ್ತಿಯನ್ನು ಆಧರಿಸಿ ಸಹಕಾರ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಹಕಾರ ಚಳವಳಿ ನಡೆಯುತ್ತಲೇ ಬಂದಿದೆ. ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿಗಳಾದ ಜವಾಹರ್ ನೆಹರು ಸಹಕಾರ ಸಂಘಗಳಿಂದ ರೈತರ ಅಭಿವೃದ್ದಿ ಸಾಧಿಸಲು ಸಾಧ್ಯವಿದೆ. ಅವರ ಆರ್ಥಿಕ ಮಟ್ಟ ಸುಧಾರಣೆ ಮತ್ತು ಆಹಾರ ಉತ್ಪಾದನಗೆ ಹೆಚ್ಚಿನ ಒತ್ತು ನೀಡಿ, ಆದೇ ಅನುದಾನವನ್ನು ನೀಡಿ, ಸಂಘಗಳ ರಚನೆಗೆ ಕಾರಣಕರ್ತರಾಗಿದ್ದರು ಎಂದು ನಂಜುಂಡಪ್ರಸಾದ್ ತಿಳಿಸಿದರು.
ಈಗ ಸಹಕಾರ ಕ್ಷೇತ್ರದಿಂದ ಯಾವುದೇ ರಂಗ ಹೊರತಾಗಿಲ್ಲ. ಇದನ್ನು ಮನಗಂಡು ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವರಾಗಿರುವ ಅಮಿತ್ ಶಾ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಪ್ರತ್ಯೇಕ ಗೊಳಿಸಿ, ಸಹಕಾರಿ ಸಂಸ್ಥೆಗಳ ಬಲವರ್ಧನೆ ಕಾಯ್ದೆಯನ್ನು ರೂಪಿಸಿದ್ದಾರೆ. 14 ಹೊಸ ಯೋಜನೆಗಳನ್ನು ಸೇರ್ಪಡೆ ಮಾಡಿ, ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಸಹಕಾರ ಸಂಘಗಳ ಸದಸ್ಯತ್ವವನ್ನು ಹೊಂದಿ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು ಎಂದರು.
ನನ್ನ ಅಣ್ಣ ಮಾಜಿ ಸಚಿವರಾದ ದಿವಗಂತ ಎಚ್.ಎಸ್. ಮಹದೇವಪ್ರಸಾದ್ ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಅವರು ಸಹಕಾರ ಸಚಿವರಾಗಿ ಬಹಳಷ್ಟು ಅಭಿವೃದ್ದಿ ಮಾಡಿದ್ದಾರೆ. ಅವರಿಂದ ಪ್ರೇರಿತನಾದ ನಾನು ಸಹ ಸಹಕಾರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಇಚ್ಚೆಯೊಂದಿಗೆ ಬಂದಿದ್ದೇವೆ. ನಮ್ಮ ಅವಧಿಯಲ್ಲಿ ಸಹಕಾರ ಒಕ್ಕುಟದ ಭವನ ನಿರ್ಮಾಣ ಜೊತೆಗೆ ಯುವ ಜನಾಂಗವನ್ನು ಹೆಚ್ಚು ಸಹಕಾರ ಕ್ಷೇತ್ರಕ್ಕೆ ತೊಡಗಿಸಿಕೊಳ್ಳುವಂತೆ ಮಾಡುವುದು ಉದ್ದೇಶವಾಗಿದೆ ಎಂದರು.
ಮೈಸೂರಿನ ಕೆಐಸಿಎಂ ಉಪನ್ಯಾಸಕ ಎಸ್. ಮಹದೇವಪ್ಪ ಮಹಿಳೆಯರು, ಯುವಜನ ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು ಕುರಿತು ಮಾತನಾಡಿ, ದೇಶದ ಅರ್ಥಿಕತೆಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಹಕಾರದ ಯೋಜನೆಗಳನ್ನು ತಳ ಹಂತ ಸಾಮಾನ್ಯನಿಗೆ ತಲುಪಿಸಲು ಸಾಧ್ಯವಾಗಿದೆ. ಹೀಗಾಗಿ ಹೆಚ್ಚು ಮಂದಿ ಸಹಕಾರಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸದಾ ಮಹಿಳೆಯರು ಹಾಗು ಅಬಲರು ಸಹಕಾರಿ ಕ್ಷೇತ್ರಗಳಲ್ಲಿ ಹೆಚ್ಚು ಸೇರ್ಪಡೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ನಾಗzಸುಂದರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್ ಬಸವಣ್ಣ, ದ್ರಾಕ್ಷಿಯಣಿ, ಸಂಘದ ಅಧ್ಯಕ್ಷ ಸೋಮಶಂಕರಮೂರ್ತಿ ಉಪಾಧ್ಯಕ್ಷ ಇಂದ್ರೇಶ್ಕುಮಾರ್, ಸಿಇಓ ಸತೀಶ್ ಎಚ್. ಜೋಶಿ, ನಿರ್ದೇಶಕರಾದ ಕೆಂಪರಾಜೇ ಅರಸ್, ಬಸವರಾಜು, ಸತೀಶ್, ಕತ್ತಿನಾಯಕ, ದೊಡ್ಡಶೆಟ್ಟಿ, ಮಣಿ, ನಂಜುಂಡಸ್ವಾಮಿ, ಮಲ್ಲಾಜಮ್ಮ, ಸರ್ವಮಂಗಳ, ಚನ್ನಪ್ಪನಪುರ ಪ್ರಸಾದ್, ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ನಾಯಕ್ ಸಹಕಾರ ಯೂನಿಯನ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಇತರರು ಇದ್ದಾರೆ.