ಚಾಮರಾಜನಗರ: ರಾಷ್ಟ್ರೀಯ ಅಂಧತ್ವ ನಿಯಂತ್ರಣದಡಿ ವಿವಿಧ ಕಾರಣಗಳಿಂದಾದ ಅಂಧತ್ವ ಪ್ರಮಾಣ ದರವನ್ನು ಇಳಿಸುವ ಉದ್ದೇಶದಿಂದ ೨೦೨೩-೨೪ನೇ ಸಾಲಿನಲ್ಲಿ ಆಶಾ ಕಿರಣ ಆಂದೋಲನ ಕಾರ್ಯಕ್ರಮದಡಿಯಲ್ಲಿ ಸಮಗ್ರ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಸೆಪ್ಟೆಂಬರ್ ೪ರಂದು ಏರ್ಪಡಿಸಲಾಗಿದೆ.
ಕಾರ್ಯಕ್ರಮ ಅನುಷ್ಠಾನಕ್ಕಾಗಿ ೨೦೨೨-೨೩ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಕಲಬುರ್ಗಿ, ಹಾವೇರಿ ಮತ್ತು ಚಾಮರಾಜನಗರ ಸೇರಿದಂತೆ ರಾಜ್ಯದಲ್ಲಿ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ನಾಗರಿಕರಿಗೆ ಕಣ್ಣಿನ ತಪಾಸಣೆ, ಕನ್ನಡಕಗಳ ಉಚಿತ ವಿತರಣೆ, ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ಮತ್ತು ಕಣ್ಣಿನ ಇತರೆ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಅಲ್ಲದೇ ಮನೆ ಮನೆ ಭೇಟಿ ನೀಡುವ ಮೂಲಕ ಉತ್ತಮ ದೃಷ್ಠಿಯ ಪ್ರಾಮುಖ್ಯತೆ ಮತ್ತು ಕಣ್ಣುಗಳನ್ನು ಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಈಗಾಗಲೇ ಆಶಾಕಿರಣ ಯೋಜನೆಯಡಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲಾ ವೈದ್ಯರು, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಪ್ರಾಥಮಿಕ ತಪಾಸಣೆಗೆ ಅಗತ್ಯವಿರುವ ಕಳುಹಿಸಲಾಗಿರುವ ಆಶಾಕಿಟ್ಗಳನ್ನು ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗಿದೆ.
ಸೆಪ್ಟೆಂಬರ್ ೪ರಂದು ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್ ೫ ರಿಂದ ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಹಂತದ ತಪಾಸಣೆಗಾಗಿ ಮನೆ ಮನೆ ಭೇಟಿ ಕಾರ್ಯಕ್ರಮ ಪ್ರಾರಂಭಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.