ಅನ್ವೇಷಣಾದಲ್ಲಿ ಪ್ರತಿಭಾನ್ವೇಷಣೆ

ಬಿಳಿಗೆರೆ : ಪ್ರತಿವರ್ಷದಂತೆ ಈ ವರ್ಷವೂ ಸಹ ಅನ್ವೇಷಣಾ ಶಿಕ್ಷಣ ಸಂಸ್ಥೆಯು ಸಂಸ್ಥಾಪಕರ ದಿನದ ಅಂಗವಾಗಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ನವೆಂಬರ್ 5 ರಂದು ಆಯೋಜಿಸಿದ್ದ ಎಸ್ಯಾಟ್ ಪರೀಕ್ಷೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಜೊತೆ ಆಗಮಿಸಿದ್ದ ಪೋಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಿರೀಶ್ ಹೆಚ್ ಎನ್ ನಮ್ಮ ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಆ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹೇಗಿರುತ್ತವೆ, ಅವುಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿಸುವ ಸದುದ್ಧೇಶದ ಜೊತೆಗೆ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಹತ್ತನೇ ತರಗತಿ ನಂತರ ತಮ್ಮ ಮಕ್ಕಳು ಪಿಯುಸಿಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಯಾವ ರೀತಿಯ ಉಪಯೋಗ, ಮಕ್ಕಳು ತಮ್ಮ ಗುರಿ ಸಾಧಿಸಲು ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂದು ಪೋಷಕರಿಗೆ ತಿಳಿಸುವ ಜೊತೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೂ ಸಹ ತಮ್ಮ ಗುರಿ ಸಾಧನೆಗೆ ಮುಂದಿನ ಯಾವ ಆಯ್ಕೆ ಸಹಾಯಕವಾಗಲಿದೆ ಎಂಬುದನ್ನು ಪಿಪಿಟಿ ಮೂಲಕ ತಿಳಿಸಲಾಯಿತು.
ಬೆಳಿಗ್ಗೆ ನಡೆದ ಎಸ್ಯಾಟ್ ಪರೀಕ್ಷೆಯಲ್ಲಿ ಎಂಟು ಮತ್ತು ಹತ್ತನೇ ತರಗತಿಯ ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಿದ್ದು ಪರೀಕ್ಷೆ ಬರೆದರು. ಮಧ್ಯಾಹ್ನ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾಸ್ಪರ್ಧೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡಿದಕ್ಕೆ ಸಂಸ್ಥೆಯ ಕಾರ್ಯದರ್ಶಿ ಹೆಚ್.ಸಿ.ಪ್ರಶಾಂತ್ ಹರ್ಷವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಚರ್ಚಾಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ್ದ ಡಾ. ದೀಪು ಸಂಸ್ಥೆಯು ನಡೆಸುತ್ತಿರುವ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಆಶಾನಂದೀಶ್, ಉಪನ್ಯಾಸಕರುಗಳಾದ ಆಶಾರಾಣಿ, ರೂಹಿ ಅಫ್ಸಾನ, ವಸೀಂ ಪಾಷ, ಖುತೇಜ, ರಶ್ಮಿ, ಪುನೀತ್ ಕುಮಾರ್, ಕಾವ್ಯ, ವೆಂಕಟೇಶ್, ಪೂಜಾ, ರವಿಚಂದ್ರ, ಸುಬ್ಬುಕೃಷ್ಣ, ಸೌಂದರ್ಯ, ಕಾವ್ಯಶ್ರೀ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *