ಚಾಮರಾಜನಗರ: ಭೂಮಿಯಲ್ಲಿರುವ ಎಲ್ಲಾ ಜೀವಸಂಕುಲಗಳಿಗೂ ಬದುಕುವ ಸಮಾನಾವಕಾಶ ಇರುವುದರಿಂದ ಅರಣ್ಯ ಸಂರಕ್ಷಣೆಗೆ ಪ್ರತಿಯೊಬ್ಬರು ತಮ್ಮದೇ ಆದ ಕೊಡುಗೆ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಲಹೆ ಮಾಡಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 69ನೇ ವನ್ಯಜೀವಿ ಸಪ್ತಾಹ (ಅಕ್ಟೋಬರ್ 2ರಿಂದ 8ರವರೆಗೆ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವನ್ಯಜೀವಿ ಸಪ್ತಾಹ ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಚಾಮರಾಜನಗರ ಶೇ. 50ರಷ್ಟು ಅರಣ್ಯ ಪ್ರದೇಶ ಹೊಂದಿರುವ ನೈಸರ್ಗಿಕ ಸಂಪದ್ಭರಿತ ಜಿಲ್ಲೆಯಾಗಿದೆ. ಹೆಚ್ಚಿನ ಹುಲಿ, ಆನೆಗಳಿರುವ ಕಾಡುಗಳನ್ನು ಜಿಲ್ಲೆ ಹೊಂದಿದೆ. ಇದು ಹೆಮ್ಮೆಯ ವಿಷಯ. ದೇಶದ ಗಡಿಯನ್ನು ಯೋಧರು ಕಾಯುವಂತೆ ಕಾಡನ್ನು ಕಾಯುವಲ್ಲಿ ಅರಣ್ಯ ರಕ್ಷಕರ ಪಾತ್ರ ಪ್ರಮುಖವಾಗಿದೆ. ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ ಆಗಿರುವುದರಿಂದ ಅರಣ್ಯ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಬದಲಾದ ಹವಾಮಾನ ವೈಪರಿತ್ಯದಿಂದ ಭೂಮಿಯ ಉಷ್ಣತೆ ಹೆಚ್ಚಾಗಿದ್ದು, ಅದನ್ನು ತಗ್ಗಿಸಲು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸುವ ಮೂಲಕ ಅರಣ್ಯ ರಕ್ಷಣೆ ಹಾಗೂ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಬೇಕು. ಯುವಕರು ಹಾಗೂ ಮಕ್ಕಳಲ್ಲಿ ಅರಣ್ಯ ಸಂರಕ್ಷಣೆಯ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಸರ ಪ್ರೇಮಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ವನ್ಯಜೀವಿ ಸಪ್ತಾಹವನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಜನ್ಮ ದಿನದಿಂದ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಬೇಕು ಎಂದರು.

ವನ್ಯಜೀವಿ ಮಂಡಳಿಯ ಸದಸ್ಯರಾದ ಜಿ. ಮಲ್ಲೇಶಪ್ಪ ಅವರು ಮಾತನಾಡಿ ಅಪಾರ ನೈಸರ್ಗಿಕವಾಗಿ ಸಂಪತ್ತನ್ನು ಜಿಲ್ಲೆ ಹೊಂದಿದೆ. 1972ರಲ್ಲಿ ಸರ್ಕಾರವು ಘೋಷಿಸಿದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಿ.ಆರ್.ಟಿ ಕೂಡ ಒಂದಾಗಿದೆ. ಬಿ.ಆರ್.ಟಿ. ಅರಣ್ಯ ಪ್ರದೇಶದಲ್ಲಿ ಕುರುಚಲು, ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ, ಶೋಲಾ ಸೇರಿದಂತೆ 7 ಬಗೆಯ ಕಾಡುಗಳಿವೆ. ಅರಣ್ಯ ಸಂರಕ್ಷಣೆಯ ಅರಿವು ಮೂಡಿಸಲು ಮಕ್ಕಳಿಗೆ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು 2011ರಿಂದ ಹಮ್ಮಿಕೊಳ್ಳಲಾಗುತ್ತಿದೆ. ಅರಣ್ಯ ಸಂರಕ್ಷಣೆಗೆ ಇಲಾಖೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ. ಕಂಟ್ರಾಕ್ಟರ್ ಅವರು ಮಾತನಾಡಿ ಹಸಿರೆ ಉಸಿರಾಗಿರುವುದರಿಂದ ಅರಣ್ಯ, ವನ್ಯಜೀವಿ ಸಂರಕ್ಷಣೆ ಇಂದು ಅನಿವಾರ್ಯವಾಗಿದೆ. ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತವೆ. ಮಾನವ-ಕಾಡುಪ್ರಾಣಿಗಳ ಸಂಘರ್ಷ ತಡೆಯಲು ಹೆಚ್ಚಾಗಿ ಅರಣ್ಯಗಳನ್ನು ಬೆಳೆಸಬೇಕು. ಅರಣ್ಯ ಒತ್ತುವರಿ ತಡೆಯಬೇಕು. ಮುಂದಿನ ಪೀಳಿಗೆಗೆ ಕಾಡುಗಳನ್ನು ಉಳಿಸುವ ಸಲುವಾಗಿ ಅರಣ್ಯ ಸಂರಕ್ಷಣೆ ಕುರಿತ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಇತರೆ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಗುಂಡ್ಲುಪೇಟೆ ವೃತ್ತದಲ್ಲಿರುವ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಕಚೇರಿಯಲ್ಲಿ 69ನೇ ವನ್ಯಜೀವಿ ಸಪ್ತಾಹ ಜಾಥಾಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಲನೆ ನೀಡಿದರು.
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಕಚೇರಿಯಿಂದ ಆರಂಭವಾದ ಜಾಗೃತಿ ಜಾಥಾ ನಗರದ ಬಿ. ರಾಚಯ್ಯ ಜೋಡಿರಸ್ತೆಯಲ್ಲಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಅಂತ್ಯಗೊಂಡಿತು. ಜಾಥಾದಲ್ಲಿ ಅಧಿಕಾರಿಗಳು, ವಿವಿಧ ಶಾಲಾಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.