ಅರ್ಥಪೂರ್ಣವಾಗಿ ನಡೆದ 69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ

ಚಾಮರಾಜನಗರ: ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವಲಯ ವ್ಯಾಪ್ತಿಯಿಂದ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ ದಿನದ ಸಮಾರೋಪ ಸಮಾರಂಭ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಇಂದು ಅರ್ಥಪೂರ್ಣವಾಗಿ ನಡೆಯಿತು.



ಆರೋಗ್ಯ ತಪಾಸಣೆ, ರಕ್ತದಾನದಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ 69ನೇ ವನ್ಯಜೀವಿ ಸಪ್ತಾಹ ದಿನದ ಸಮಾರೋಪ ಸಮಾರಂಭವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲೇಶಪ್ಪ ಅವರು ಮಾತನಾಡಿ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ವನ್ಯಜೀವಿಗಳ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ವರ್ಷದ ವನ್ಯಜೀವಿ ಸಪ್ತಾಹ ದಿನವನ್ನು ಆಚರಿಸಿದೆ. ಈ ರೀತಿಯ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಅರಣ್ಯ ಜೀವಸಂಕುಲಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಗಿರಿಜನ ಬಂಧುಗಳು ಹಾಗೂ ಕಾಡಂಚಿನ ಭಾಗದ ಜನರಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದಾಗ ಮಾತ್ರ ಕಾಡಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಆರ್.ಟಿ ಹುಲಿ ಸಂರಕ್ಷಿತಾ ವಲಯ ಅರಣ್ಯಾಧಿಕಾರಿಯಾದ ದೀಪಾ ಜೆ ಕಂಟ್ರಾಕ್ಟರ್ ಮಾತನಾಡಿ ಚಾಮರಾಜನಗರ ಜಿಲ್ಲೆಯು ಹುಲಿ, ಆನೆ ಗಣತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಕೇವಲ ಯಾವುದೇ ಒಬ್ಬರಿಂದ ಸಾಧ್ಯವಾಗದು ಇದು ಸ್ಥಳೀಯ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯಿಂದ ಸಾಧ್ಯವಾಗಿದೆ. ರೈತರು, ಗಿರಿಜನರು ಹಾಗೂ ಮಾಧ್ಯಮಮಿತ್ರರ ಸಂಪೂರ್ಣ ಬೆಂಬಲದಿಂದ ಉತ್ತಮ ಕಾರ್ಯಕ್ರಮಗಳ ನಡೆಸಲು ಸಾಧ್ಯವಾಗುತ್ತದೆ. 69ನೇ ವನ್ಯಜೀವಿ ಸಪ್ತಾಹ ದಿನವು ಸುಮಾರು 7 ದಿನಗಳಿಂದ ಜನರಿಗೆ ಅರಣ್ಯ ಹಾಗೂ ಜೀವ ವೈವಿಧ್ಯತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನೀಡಿ ಯಶಸ್ಸು ಕಂಡಿದೆ ಎಂದರು.

ಬಸವರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಶ್ವೇತಾ ಅವರು ಮಾತನಾಡಿ, ಪ್ರಕೃತಿಯನ್ನ ಎಲ್ಲರೂ ಗೌರವಿಸಬೇಕು. ಪ್ರಕೃತಿ ಜೊತೆಗೆ ಬೆಳೆಯುವಂತಾಗಬೇಕು. ಯಾರಿಗೂ ತೊಂದರೇ ನೀಡದಂತೆ ಬದುಕಬೇಕು. ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ತುಂಬಾ ಒಳ್ಳೇಯ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಸರ್ವರಿಗೂ ಒಳ್ಳೇಯದಾಗಲಿ ಎಂದು ನುಡಿದರು.

69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ, ಮ್ಯಾರಾಥಾನ್, ಆನ್‍ಲೈನ್ ಕ್ವಿಜ್ , ಪೋಟೋಗ್ರಾಫಿ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ನಂತರ ಗೊರುಕನ ನೃತ್ಯದ ಮೂಲಕ ಸ್ಥಳೀಯರು ಎಲ್ಲರ ಗಮನ ಸೆಳೆದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *