ಚಾಮರಾಜನಗರ, ಅ. 9- ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ದಲಿತ ಸಂಘಟನೆಗಳು ಹಾಗೂ ಅಂಬೇಡ್ಕರ್ ಸಂಘಟನೆಗಳ ಸಹಯೋಗದಲ್ಲಿ ಅ. 13 ರಂದು ಶುಕ್ರವಾರ ನಡೆಯುವ ಮಹಿಷಾ ದಸರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಎಲ್ಲಾ ದಲಿತಪರ ಸಂಘಟನೆಗಳು, ಸಂಘ, ಸಂಸ್ಥೆಗಳ ಮುಖ್ಯಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡುವಂತೆ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್‌ಸ್ವಾಮೀಜಿ ಮನವಿ ಮಾಡಿದರು.

ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಹಿಷ ದಸರಾ ಮಹೋತ್ಸವ ಪೂರ್ವಭಾವಿಯಲ್ಲಿ ಅವರು ಮಾತನಾಡಿದರು. ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ-೨೦೨೩ ರಾಜ್ಯದ ಮೂಲನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದರು.
ಅಂದು ೯-೩೦ಕ್ಕೆ ಮೈಸೂರು ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಪುಷ್ಷಾರ್ಚನೆ ಮಾಡಿ ನಂತರ ಚಾಮುಂಡಿ ಬೆಟ್ಟದ ಮಹಾದ್ವಾರದ ಬಳಿಯಿಂದ ಮೆರವಣಿಗೆ ಹೊರಟು, ವಿವಿಧ ವೇಷಭೂಷಣ ಸಾಂಸ್ಕೃತಿಕ ಕಲಾತಂಡಗಳು ಮತ್ತು ಕಲಾವಾದ್ಯಗಳು, ಜಾತ್ಯಾತೀತ ಮಹನೀಯರ ಸ್ತಬ್ದಚಿತ್ರಗಳು ತಾವರಕಟ್ಟೆಯಿಂದ ಕರುಬಾರಹಳ್ಳಿ ವೃತ್ತ, ಸಿದ್ದಾರ್ಥ ಬಡಾವಣೆ, ನಜರ್‌ಬಾದ್, ಹಾರ್ಡಿಂಜ್ ವೃತ್ತ ಮುಖಾಂತರ ಪುರಭವನದ ಭವ್ಯ ವೇದಿಕೆಯಲ್ಲಿ ಸಮಾವೇಶಗೊಳ್ಳಲಾಗುವುದು.
ನಾಡಿನ ಹಿರಿಯ ಸಾಹಿತಿಗಳು, ಮಾಜಿ ಸಚಿವರಾದ ಬಿ.ಟಿ.ಲಲಿತಾನಾಯಕ್ ಮಹಿಷ ದಸರಾ ಉದ್ಘಾಟಿಸಲಿದ್ದಾರೆ. ಇತಿಹಾಸ ತಜ್ಞರಾದ ತಲಕಾಡು ಚಿಕ್ಕರಂಗೇಗೌಡರು ವಿಶೇಷ ಉಪನ್ಯಾಸ ಮಾಡಲಿದ್ದಾರೆ. ಅನೇಕ ನಾಡಿನ ಚಿಂತಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯಿಂದ ದಲಿತಪರ ಸಂಘಟನೆಗಳು, ಸಂಘ- ಸಂಸ್ಥೆಯ ಮುಖ್ಯಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಶ್ರೀಗಳು ಕೋರಿದರು
ಸಭೆಯಲ್ಲಿ ಮಹಿಷ ದಸರಾ ಸಮಿತಿ ಅಧ್ಯಕ್ಷ ಪುರುಷೋತ್ತಮ್, ಮುಖಂಡರಾದ ಕೆ.ಎಂ.ನಾಗರಾಜು
ಸಿ.ಕೆ.ಮಂಜುನಾಥ್, , ಸಿ.ಎಂ.ಶಿವಣ್ಣ, ವಕೀಲರಾದ ಪ್ರಸನ್ನಕುಮಾರ್, ಮಧುಸೂದನ್, ಬಸವಣ್ಣ, ಶಿವನಾಗಣ್ಣ, ತಾ.ಪಂ.ಮಾಜಿ ಸದಸ್ಯ ರೇವಣ್ಣ, ಕೆಂಪರಾಜು, ರವಿಚಂದ್ರಪ್ರಸಾದ್, ಕುಮಾರ್, ಸಂಘಸೇನ, ಬಂಗಾರಸ್ವಾಮಿ, ಸೋಮಣ್ಣ, ನಾಗಶೇಖರ ಇತರರು ಭಾಗವಹಿಸಿದ್ದರು.