ಅ. 17 ರಿಂದ 20ರವರೆಗೆ ಚಾಮರಾಜನಗರ ದಸರಾ ಮಹೋತ್ಸವ : ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ಪೂರ್ವ ಸಿದ್ದತೆಗಳ ಪರಿಶೀಲನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್ 17 ರಿಂದ 20ರವರೆಗೆ ಆಯೋಜಿಸಲಾಗಿರುವ ಚಾಮರಾಜನಗರ ದಸರಾ ಮಹೋತ್ಸವಕ್ಕಾಗಿ ಕೈಗೊಳ್ಳುತ್ತಿರುವ ಪೂರ್ವ ಸಿದ್ದತೆಗಳನ್ನು ಜಿಲ್ಲಾಧಿಕಾರಿಯವರಾದ ಶಿಲ್ಪಾ ನಾಗ್ ಅವರು ಇಂದು ಪರಿಶೀಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ನೇಮಕವಾಗಿರುವ ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳ ಸಭೆಯಲ್ಲಿ ದಸರಾ ಕುರಿತ ಪೂರ್ವ ಸಿದ್ದತೆಗಳ ಬಗ್ಗೆ ಜಿಲ್ಲಾಧಿಕಾರಿಯವರು ಪರಾಮರ್ಶೆ ನಡೆಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ದಸರಾದ ಪ್ರಮುಖ ಆಕರ್ಷಣೆಯಾದ ದೀಪಾಲಂಕಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವಿಶೇಷ ಗಮನಹರಿಸಿ ದೀಪಾಲಂಕಾರವನ್ನು ಮಾಡಬೇಕು. ದೀಪಾಲಂಕಾರ ಸಮಿತಿ ಎಲ್ಲ ಸಿದ್ದತೆಗಳನ್ನು ತ್ವರಿತವಾಗಿ ಆರಂಭಿಸಬೇಕೆಂದು ತಿಳಿಸಿದರು.

ಸಾಂಸ್ಕøತಿಕ ಸಮಿತಿ ಕಲಾತಂಡಗಳನ್ನು ಆಯ್ಕೆ ಮಾಡಬೇಕು. ಮುಖ್ಯ ವೇದಿಕೆ, ಇನ್ನಿತರ ವೇದಿಕೆಗಳಲ್ಲಿ ಕಲಾವಿದರಿಗೆ ಅವಕಾಶ ನೀಡಬೇಕು. ಮೆರವಣಿಗೆಗೂ ಜಾನಪದ ಕಲಾತಂಡಗಳ ಆಯ್ಕೆ ನಡೆಯಬೇಕು. ಕಾಲೇಜು ವಿದ್ಯಾರ್ಥಿಗಳಿಂದ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಲು ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ವೇದಿಕೆ ನಿರ್ಮಾಣ, ಧ್ವನಿ ಬೆಳಕು, ಶಾಮಿಯಾನ, ಬೃಹತ್ ಎಲ್.ಇ.ಡಿ, ವೇದಿಕೆ ಅಲಂಕಾರ ಎಲ್ಲವೂ ಪರಿಪೂರ್ಣವಾಗಿ ಇರಬೇಕು. ಸುರಕ್ಷಿತ ಕ್ರಮಗಳನ್ನೂ ಖಾತರಿ ಪಡಿಸಿಕೊಳ್ಳಬೇಕು. ಸ್ವಚ್ಚತಾ ಸಮಿತಿ, ಭದ್ರತಾ ಸಂಚಾರ, ನಿಯಂತ್ರಣ ಸಮಿತಿಗಳು ಸಂಬಂಧಿಸಿದ ಕಾರ್ಯಗಳಿಗೆ ಮುಂದಾಗಬೇಕು ಎಂದರು.

ಕಲಾತಂಡಗಳು, ಸ್ತಬ್ದ ಚಿತ್ರಗಳ ಮೆರವಣಿಗೆಗೆ ಮೆರಗು ತರಬೇಕು. ಸ್ತಬ್ದ ಚಿತ್ರಗಳಲ್ಲಿ ಕಾರ್ಯಕ್ರಮಗಳು, ಸರ್ಕಾರದ ಯೋಜನೆಗಳ ಮಾಹಿತಿ ಇರಬೇಕು. ರೈತ ದಸರಾ, ಮಹಿಳಾ ದಸರಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರಬೇಕು. ದಸರಾ ಅಂಗವಾಗಿ ಆಯೋಜಿಸಲಾಗುವ ಮ್ಯಾರಾಥಾನ್‍ನಲ್ಲಿ ಭಾಗವಹಿಸಲು ಸಾರ್ವಜನಿಕರಿಗೂ ಆಹ್ವಾನ ನೀಡಬೇಕು. ಸಾರ್ವಜನಿಕರ ಸಹಭಾಗಿತ್ವದಲ್ಲಿ ದಸರಾ ನಡೆಯಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಆಹಾರ ಮೇಳ ಆಯೋಜನೆಯಾಗಲಿ. ಇಲ್ಲಿ ಮಹಿಳಾ ಸ್ವ ಸಹಾಯ ಸಂಘದ ಗುಂಪುಗಳು ಮೊದಲೇ ಸಿದ್ದಪಡಿಸಿ ತರಲಾದ ತಿನಿಸುಗಳು, ವಸ್ತುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶವಾಗುವಂತೆ ಉಚಿತ ಮಳಿಗೆಗಳನ್ನು ಒದಗಿಸಬೇಕು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಯಾಗುವ ಸ್ಥಳಗಳ ಬಳಿಯೂ ಮಳಿಗೆಗಳನ್ನು ನೀಡಿ ಉತ್ತೇಜಿಸಬೇಕು ಎಂದರು.

ಸಾಂಪ್ರದಾಯಿಕ ಪೂಜಾ ಕೈಂಕರ್ಯ, ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾಯಕ್ರಮಗಳಿಗೆ ಶಿಷ್ಟಾಚಾರ ಪಾಲನೆ ಮಾಡಬೇಕು. ಗ್ರಾಮೀಣ ದಸರಾ ಕಾರ್ಯಕ್ರಮವೂ ತಾಲೂಕುಗಳಲ್ಲಿ ಆಯೋಜನೆಯಾಗಲಿದೆ. ದಸರಾ ಮಹೋತ್ಸವ ಯಶಸ್ವಿಗೆ ಅಧಿಕಾರಿಗಳು ಯಾವುದೇ ಲೋಪವಿಲ್ಲದೇ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಡಿವೈಎಸ್‍ಪಿ ಲಕ್ಷ್ಮಯ್ಯ, ತಹಶೀಲ್ದಾರ್ ಬಸವರಾಜು, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇಅರಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *