ಚಾಮರಾಜನಗರ: ಹಲವಾರು ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ‘ಸಮಗ್ರ ಶಿಕ್ಷಣ ಕರ್ನಾಟಕ’ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾದ ಸಮೀಕ್ಷೆಯನ್ನು ಅಕ್ಟೋಬರ್ 26ರಿಂದ ನವೆಂಬರ್ 4ರವರೆಗೆ ಎಲ್ಲಾ ಜನವಸತಿ ಪ್ರದೇಶಗಳಲ್ಲಿ ನಡೆಸಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲಾಗುತ್ತಿದ್ದು, ಸಮೀಕ್ಷಾ ಕಾರ್ಯಕ್ಕೆ ಎಲ್ಲಾ ಜನವಸತಿ ಪ್ರದೇಶದ ನಾಗರಿಕರು, ಜನಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳು ಸಮೀಕ್ಷಾ ತಂಡದವರಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಕೋರಿದೆ.
ರಾಜ್ಯದಲ್ಲಿ ಆರ್.ಟಿ.ಇ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರುವುದು ಎಲ್ಲಾ ನಾಗರಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಸಮೀಕ್ಷಾ ಕಾರ್ಯದಲ್ಲಿ 2023-24ನೇ ಸಾಲಿನಲ್ಲಿ 6 ರಿಂದ 14 ವರ್ಷ ಮೇಲ್ಪಟ್ಟ ಶಾಲೆಗೆ ದಾಖಲಾಗಿ ಶಾಲೆ ಬಿಟ್ಟ ಹಾಗೂ ಶಾಲೆಗೆ ದಾಖಲಾಗದ ಮಕ್ಕಳನ್ನು ಗುರುತಿಸಲಾಗುತ್ತಿದೆ.
ಶಾಲಾ ಮಾಹಿತಿಯನ್ವಯ ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ಅಂದರೆ ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಮದರಸದಲ್ಲಿ ಕಲಿಯುತ್ತಿರುವ ಮಕ್ಕಳು, ಆಸ್ಪತ್ರೆ, ಹೋಟೆಲ್, ಛತ್ರಗಳು, ಚಿತ್ರಮಂದಿರಗಳು, ಸಣ್ಣ ಕಾರ್ಖಾನೆಗಳು, ಇಟ್ಟಿಗೆ ತಯಾರಿಸುವ ಸ್ಥಳ, ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳು, ಎಸ್ಟೇಟ್, ಪ್ಲಾಂಟೇಷನ್, ರಸ್ತೆ ಕಾಮಗಾರಿ, ಗಣಿ ಪ್ರದೇಶ, ಕ್ವಾರಿಗಳು, ಗುಡ್ಡಗಾಡು ಪ್ರದೇಶ, ಬಂದಿಖಾನೆಗಳು, ಕೊಳಗೇರಿ ಪ್ರದೇಶಗಳಲ್ಲಿ, ಬುಡಕಟ್ಟು ಜನಾಂಗದ ಪ್ರದೇಶ, ರೈಲ್ವೆ ಸ್ಟೇಷನ್, ಕಾಡು ಪ್ರದೇಶ, ಐತಿಹಾಸಿಕ ಸ್ಥಳಗಳು, ಗ್ಯಾರೇಜ್ ಗಳಿಗೆ ವಿವಿಧ ಇಲಾಖಾ ಅಧಿಕಾರಿಗಳ ತಂಡ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಹಾಗೂ ಶಾಲೆಗೆ ದಾಖಲಾಗದೇ ಇರುವ ಮಕ್ಕಳನ್ನು ಗುರುತಿಸುವರು. ಸಮೀಕ್ಷಾ ಕಾರ್ಯಕ್ಕೆ ಸಹಕರಿಸುವಂತೆ ಉಪನಿರ್ದೆಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.