ಕನ್ನಡ ರಾಜ್ಯೋತ್ಸವ : ಸರ್ವರ ಸಹಕಾರ ಅಗತ್ಯ – ಜಿಲ್ಲಾಧಿಕಾರಿ

ಚಾಮರಾಜನಗರ: ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50 ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಇದಕ್ಕೆ ಸರ್ವರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಸಂಬಂಧ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸುತ್ತೋಲೆ ಅನುಸಾರ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕøತಿ, ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕರ್ನಾಟಕ ಸಂಭ್ರಮ-50 ಅಭಿಯಾನದ ಅಂಗವಾಗಿ ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಧ್ವಜಾರೋಹಣ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುತ್ತಿದೆ. ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣರಾಯರು ರಚಿಸಿರುವ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಎಲ್ಲಾದರು ಇರು, ಎಂತಾದರು ಇರು, ದ.ರಾ. ಬೇಂದ್ರೆ ಯವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡದ ದೀಪ ಹಾಗೂ ಚನ್ನವೀರಕಣವಿ ಅವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ದತೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಯಶಸ್ವಿಯಾಗಿ ಕೈಗೊಳ್ಳಲು ಸಂಘಟನೆಗಳ ಮುಖಂಡರು ಅಗತ್ಯ ಸಲಹೆ, ಅಭಿಪ್ರಾಯ ನೀಡಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ಕನ್ನಡ ಗೀತ ಗಾಯನ ಕಾರ್ಯಕ್ರಮಕ್ಕೆ ಹೆಚ್ಚು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು. ನವೆಂಬರ್ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳು ಮಾತ್ರ ಪ್ರದರ್ಶನಗೊಳ್ಳಬೇಕು. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಜಾಗೃತಿ ಮೂಡಿಸಬೇಕು. ಬ್ಯಾಂಕುಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಾಗಬೇಕು. ರಾಜ್ಯೋತ್ಸವ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ, ಜೈ ಭುವನೇಶ್ವರಿ ಪುತ್ಥಳಿಗೆ ಮಾಲಾರ್ಪಣೆ ಮಾಡಬೇಕು. ಅರ್ಥಪೂರ್ಣ ಕಾರ್ಯಕ್ರಮಗಳು ಆಯೋಜನೆಯಾಗಬೇಕು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು ನೀಡಿದರು.
ಕೆಲ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡದಿರುವ ಬಗ್ಗೆ ದೂರುಗಳಿವೆ. ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಇರಬೇಕು. ಕನ್ನಡ ಭಾಷೆಗೆ ಪ್ರಾಧಾನ್ಯತೆ ಇರಬೇಕು. ನಾಮಫಲಕಗಳಲ್ಲಿ ಕನ್ನಡ ಪ್ರಾಧನ್ಯವಾಗಿ ಬಳಕೆಯಾಗದಿರುವುದು ಕಂಡು ಬಂದರೆ ದಂಡ ವಿಧಿಸಬೇಕು. ಗಡಿ ಭಾಗಗಳಲ್ಲಿಯೂ ಕನ್ನಡಕ್ಕೆ ವಿಶೇಷ ಆದ್ಯತೆ ಇರುವಂತೆ ನೋಡಿಕೊಳ್ಳುವುದೂ ಸೇರಿದಂತೆ ಇತರೆ ಸಲಹೆ ಅಭಿಪ್ರಾಯಗಳನ್ನು ಮುಖಂಡರು ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಭೆಯಲ್ಲಿಯೇ ಇದ್ದ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲಾ ಬ್ಯಾಂಕುಗಳಲ್ಲಿ ನವೆಂಬರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದರು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಸಲಹೆಗಳನ್ನು ಆಧರಿಸಿ ಕಾರ್ಯಕ್ರಮ ರೂಪಿಸುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಮುಖಂಡರಾದ ಸಿ.ಎಂ. ಮಹದೇವಶೆಟ್ಟಿ, ಗು. ಪುರುಷೋತ್ತಮ್, ಸಿ.ಎಂ. ಕೃಷ್ಣಮೂರ್ತಿ, ಸಿ.ಕೆ. ಮಂಜುನಾಥ್, ಸಿ.ಎಂ. ನರಸಿಂಹಮೂರ್ತಿ, ಚಾ.ಗು. ನಾಗರಾಜು, ಪಣ್ಯದಹುಂಡಿ ರಾಜು, ಕೆ.ಆರ್. ನಾರಾಯಣ, ಶಿವಣ್ಣ, ಸಿದ್ದಶೆಟ್ಟಿ, ಘಟಂ ಕೃಷ್ಣ, ಚಾ.ಹ. ಶಿವರಾಜು, ಎಸ್. ಮಹೇಶ್‍ಗೌಡ, ಮಲ್ಲಣ್ಣ, ಬಂಗಾರ ನಾಯಕ, ಶಿವಸ್ವಾಮಿ, ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *