ಚಾಮರಾಜನಗರ : ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ನೀಡುತ್ತಿರುವ ಕಾಂಗ್ರೆಸ್ ಮುಖಂಡರ ಹೇಳಿಕೆಯನ್ನು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್ ಮೂಡ್ಲುಪುರ ಖಂಡಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡಿಪಾಯ ಹಾಕಿದ ವೀರಶೈವ ಲಿಂಗಾಯತ ಸಮುದಾಯದ ಶಾಸಕರನ್ನು ಕಡೆಗಣಿಸುವುದು ಸರಿಯಲ್ಲ. ಈಗ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಿರುವವರು ಲಿಂಗಾಯತ ಸಮುದಾಯದ ಬೆಂಬಲದಿಂದಲೇ ಈ ಮಟ್ಟಕ್ಕೆ ಬಂದಿರುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ವಿರುದ್ಧ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಶಾಸಕ ಬೇಲೂರು ಗೋಪಾಲಕೃಷ್ಣ ಅವರು ಶಾಮನೂರು ಶಿವಶಂಕರಪ್ಪ ವಿರುದ್ಧ ಹೇಳಿಕೆ ನೀಡಲು ಯಾವ ನೈತಿಕತೆ ಇದೆ. ಎಚ್.ವಿಶ್ವನಾಥ್ ಅಧಿಕಾರದಲ್ಲಿ ಇದ್ದರೆ ಒಂದು ತರಹ, ಇಲ್ಲದಿದ್ದರೆ ಒಂದು ತರಹ ಮಾತನಾಡುತ್ತಾರೆ. ಬೇಲೂರು ಗೋಪಾಲಕೃಷ್ಣ ಹಾಲಪ್ಪ ಅವರನ್ನು ಜೈಲಿಗೆ ಕಳುಹಿಸಿ ಬದುಕು ಕಟ್ಟಿಕೊಂಡಿದ್ದಾರೆ. ಇಂತವರಿಗೆ ಯಡಿಯೂರಪ್ಪ ಅವರ ಬಗ್ಗೆಯಾಗಲಿ, ಶಾಮನೂರು ಶಿವಶಂಕರಪ್ಪ ಬಗ್ಗೆಯಾಗಲಿ ಮಾತನಾಡುವ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಗಾಯತ ಸಮುದಾಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ವಿರುದ್ಧ ಇದೇ ತರಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ನಿಲ್ಲದೆ ಹೀಗೆ ಮುಂದುವರಿಸಿದರೆ, ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.