ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಕಳೆದ 49 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಕೂಡ ಬಾಯಿ ಮುಚ್ಚಿಕೊಂಡು ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ಚರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ .ಬಾಯಿಮುಚ್ಚಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತೆ ನ.15 ರವರಗೆ ಪ್ರತಿದಿನಲೂ 2600 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿ ಬಿಡುವಂತೆ ಆದೇಶ ನೀಡಿರುವುದು ಇದು ಅತ್ಯಂತ ಖಂಡನೀಯ. ಕರ್ನಾಟಕ ರಾಜ್ಯಕ್ಕೆ ಇದೊಂದು ಮರಣಶಾಸನವಾಗಿದೆ. ಇನ್ನೂ ಮುಂದೆ ಕಾವೇರಿ ನೀರು ನಿರ್ವಹಣಾ ಮಂಡಳಿ ಅನ್ನುವ ಹೆಸರನ್ನು ತೆಗೆದು ಹೊಸ ಹೆಸರನ್ನು ನಾಮಕರಣ ಮಾಡಬೇಕು. ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಕೇಂದ್ರ ಸರ್ಕಾರ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರವುದನ್ನು ಖಂಡಿಸಿ ನಮ್ಮ ಸಂಘಟನೆ ವತಿಯಿಂದ ನಗರದಲ್ಲಿ ಕಳೆದ 49 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಕೂಡ ಸರ್ಕಾರಗಳು, ಕಾವೇರಿ ನೀರು ನಿರ್ವಹಣಾ ಮಂಡಳಿ ಬಾಯಿಮುಚ್ಚಿಕೊಂಡು ಕರ್ನಾಟಕ ರಾಜ್ಯ ಕಾವೇರಿ ನೀರಿನ ವಿಚಾರದಲ್ಲಿ ಅನ್ಯಾಯ ಮಾಡಿವೆ ಎಂದು ಅರೋಪಿಸಿ ನಾವು ಬಾಯಿಮುಚ್ಚಿಕೊಂಡು ವಿನೂತನ ಪ್ರತಿಭಟನೆ ನಡೆಸಲಾಗಿದೆ. ಎಂದರು.
ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು. ಕರ್ನಾಟಕ ಸರ್ಕಾರ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿರಾಜು, ನಿಜಧ್ವನಿಗೋವಿಂದರಾಜು, ಚಾ.ವೆಂ.ರಾಜ್ ಗೋಪಾಲ್, ಸೋಮವಾರಪೇಟೆ ಮಂಜು, ನಂಜುಂಡಸ್ವಾಮಿ, ಚಾ.ಹ.ರಾಮು, ಮಹೇಶ್ ಗೌಡ, ವೀರಭದ್ರ, ತಾಂಡವಮೂರ್ತಿ, ಲಿಂಗರಾಜು,ರಾಜಪ್ಪ, ಮೂಡ್ಲುಪುರಪ್ರಕಾಶ್ ಇತರರು ಹಾಜರಿದ್ದರು.