ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ

ಚಾಮರಾಜನಗರ: ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಬೋರ್‍ವೆಲ್, ಟ್ಯಾಂಕರ್ ನೀರು, ಕುಡಿಯುವ ನೀರಿನ ಪ್ಲಾಂಟ್‍ಗಳನ್ನು ಅಳವಡಿಸಿಕೊಳ್ಳಬೇಕು. ಹಣ ಬೇಕಿದ್ದರೆ ಸರ್ಕಾರಕ್ಕೆ ಕೇಳಿ. ಎಷ್ಟು ಬೇಕಾದರೂ ಕೊಡುತ್ತೇವೆ. ಆದರೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಸ್ಥಿತಿ ಗತಿ ಬಗ್ಗೆ ಸಮಗ್ರ ಮಾಹಿತಿ ಮತ್ತು ಆಗಬೇಕಾಗಿರುವ ಕೆಲಸಗಳು ಹಾಗೂ ಈ ಕೆಲಸಗಳಿಗೆ ತಗುಲುವ ವೆಚ್ಚದ ಬಗ್ಗೆ ವರದಿ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು ಎಂದರು.

ಒಳಚರಂಡಿ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳು, ಯೋಜನಾಧಿಕಾರಿಗಳು ನೀಡಿದ ಮಾಹಿತಿಗಳು ಪರಸ್ಪರ ತದ್ವಿರುದ್ಧ ಇರುವುದಕ್ಕೆ ಮುಖ್ಯಮಂತ್ರಿಗಳು ಗರಂ ಆದರು.

ಜೂನ್‍ನಿಂದ ಆಗಸ್ಟ್‍ವರೆಗೂ ಅಗತ್ಯವಾದಷ್ಟು ಮಳೆ ಆಗದ ಕಾರಣದಿಂದ ಬರದ ಮತ್ತು ಸಂಕಷ್ಟದ ಪರಿಸ್ಥಿತಿ ಇದೆ. 161 ತೀವ್ರ ಬರಗಾಲ, 34 ತಾಲ್ಲೂಕುಗಳು ಸಾಧಾರಣ ಬರಗಾಲದ ಸ್ಥಿತಿ ಇದೆ. ಇದಕ್ಕೆ ಇನ್ನಷ್ಟು ತಾಲ್ಲೂಕುಗಳು ಸೇರಬಹುದು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಸಭೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಹಣಕ್ಕೆ ಯಾವುದೇ ಕೊರತೆ ಇಲ್ಲ. ಯಾವುದೇ ಮೂಲದಿಂದಾದರೂ ಸರಿ. ಕುಡಿಯುವ ನೀರಿಗೆ ಕೊರತೆ ಆಗಬಾರದು. ಸಾರ್ವಜನಿಕರಿಂದ ದೂರುಗಳು ಬರದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಯವರು ನಿರ್ದೇಶನ ನೀಡಿದರು.

ಬರಗಾಲದ ಕಾರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಕೆಲಸ ಹುಡುಕಿಕೊಂಡು ವಲಸೆ ಹೋಗುವ, ಗುಳೆ ತೆರಳುವ ಸ್ಥಿತಿ ಬಾರದಂತೆ, ನರೇಗಾ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. 150 ದಿನ ಕೆಲಸ ಕೊಡಬೇಕು. ಮುಂದಿನ ದಿನಗಳಲ್ಲಿ ಜಾನವಾರುಗಳಿಗೆ ನೀರು, ಮೇವು ಕೊರತೆ ಆಗಬಾರದು. ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳಿಗೆ ಮೇವು ಹೋಗದಂತೆ ತಡೆಯಬೇಕು. ರಾಸುಗಳಿಗೆ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದರು.

ಖಾಸಗಿಯಾಗಿ ಸಾಲ ಕೊಟ್ಟವರು ರೈತರಿಗೆ ಬಲವಂತದ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ಬರದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಶೋಷಣೆ ಮಾಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೃಷಿ ಇಲಾಖೆ ರೈತರಿಗೆ ಮತ್ತೆ ಮತ್ತೆ ಬೀಜ, ಗೊಬ್ಬರ, ಔಷಧಿ ಸರಬರಾಜು ಮಾಡಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯಲು ಪೆÇ್ರೀತ್ಸಾಹಿಸಬೇಕು. ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮವಹಿಸಲಾಗುವುದು ಎಂದರು.

ಚುನಾವಣೆಗೆ ಮೊದಲು ನಾವು ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿಯಾಗಿದೆ. ಈ ನಾಲ್ಕೂ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಜನರಿಗೆ, ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಲೋಪ ಆಗಬಾರದು ಎಂದು ತಿಳಿಸಿದರು.

ಎರಡು ಲಕ್ಷ ತೊಂಬತ್ತು ಸಾವಿರ ಪಡಿತರ ಚೀಟಿಗಳಿದ್ದೂ ಇನ್ನೂ ಒಂದು ಲಕ್ಷ 24 ಸಾವಿರ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿಯ ಹಣ ಇನ್ನೂ ತಲುಪಿಲ್ಲ ಏಕೆ ? ಲೋಪಗಳನ್ನು ಸರಿಪಡಿಸಲು 3 ತಿಂಗಳಾದರೂ ಏಕೆ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಆಹಾರ ಇಲಾಖೆಯ ಅಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿ, ಸರ್ಕಾರದ ಸವಲತ್ತು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ತಕ್ಷಣ ಏನೇ ಲೋಪಗಳಿದ್ದರೂ ಬಗೆಹರಿಸಿ ಜನರಿಗೆ ಸವಲತ್ತು ತಲುಪಿಸಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಸಿದರು.

ಶಕ್ತಿಯೋಜನೆ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಯವರು ಹನೂರು ಭಾಗದ ಹಲವು ಕಡೆ ಬಸ್‍ಗಳ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವರದಿಯನ್ನು ತೋರಿಸಿ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯ ಪ್ರಗತಿಯನ್ನು ಮುಖ್ಯಮಂತ್ರಿಗಳು ಪರಾಮರ್ಶಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಮತ್ತು ಅರಣ್ಯ ಪ್ರದೇಶಗಳು ಇರುವುದರಿಂದ ಹಗಲು ಹೊತ್ತಿನಲ್ಲೇ 3 ಫೇಸ್ ವಿದ್ಯುತ್ ನಿರಂತರ 7 ಗಂಟೆ ಇರುವಂತೆ ಮಾಡಿ ಎನ್ನುವ ಬೇಡಿಕೆ ರೈತರಿಂದ ಇದೆ. ಆದ್ದರಿಂದ ಈ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಹನೂರು ತಾಲ್ಲೂಕಿನಲ್ಲಿ ಕಳೆದ 6 ತಿಂಗಳಿನಿಂದ ನರೇಗಾ ಕೆಲಸ ಆಗಿಲ್ಲ. ಸಾಮಾಗ್ರಿಗಳ ಬಿಲ್‍ಗಳು ಪಾವತಿಯಾಗಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಅವರು ದೂರಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯ್ತಿ ಸಿಇಓ, ನಮ್ಮಿಂದ ಪ್ರಸ್ತಾವೆನೆ ಹೋಗಿರಲಿಲ್ಲ. ಹೀಗಾಗಿ 35 ಕೋಟಿ ಸಾಮಾಗ್ರಿ ಬಿಲ್‍ಗಳು ಬಾಕಿ ಇತ್ತು. ಈಗ ಲೋಪಗಳನ್ನೆಲ್ಲಾ ಸರಿಪಡಿಸಿ ಸಂಬಂದಪಟ್ಟವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ನಾಳೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ. ಪ್ರಸ್ತಾವನೆ ತಲುಪಿದ ತಕ್ಷಣ ಹಣ ಬಿಡುಗಡೆ ಮಾಡುವುದಾಗಿ ನರೇಗಾ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬರಗಾಲ ಇರುವುದರಿಂದ ಉದ್ಯೋಗ ಖಾತ್ರಿಯನ್ನು ಪರಿಣಾಮಕಾರಿಯಾಗಿ ಬಳಸಿ. ನರೇಗಾ ಕೆಲಸಗಳು ಹೆಚ್ಚೆಚ್ಚು ನೀಡಿ ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳುವುದು ನಿಮ್ಮ ಹೊಣೆಗಾರಿಕೆ. ಜನ ಜೀವನ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು. ಯಾವುದೇ ಕಾರಣಕ್ಕೂ ಕೆಲಸ ಕೇಳಿದವರಿಗೆ ಕೆಲಸ ಇಲ್ಲ ಎಂದು ಹೇಳುವಂತಿಲ್ಲ. ಕೆಲಸ ಕೊಡಬೇಕು. ಅವರ ಕೈಗೆ ಹಣವನ್ನೂ ಕೊಡಬೇಕು ಎಂದು ಸೂಚಿಸಿದರು.

ಕೋವಿಡ್ ಅವಧಿಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಸರ್ಕಾರಿ ಉದ್ಯೋಗ ಕೊಡುವುದಾಗಿ ನಾವು ಭರವಸೆ ನೀಡಿದ್ದೆವು. ಇವರಿಗೆ ಕೆಲಸ ಕೊಡುವ ಸೂಚನೆಯನ್ನೂ ನಾನು ನೀಡಿದ್ದೆ. ಆ ಬಗ್ಗೆ ಏನಾಗಿದೆ ಬೆಳವಣಿಗೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು, 32 ಮಂದಿಗೆ ಕಾಯಂ ಉದ್ಯೋಗ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಅವರ ವಿದ್ಯಾರ್ಹತೆಗಳನ್ನು ಪಡೆದುಕೊಂಡು, ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳು ಎಲ್ಲಿ ಖಾಲಿ ಇವೆ ಎನ್ನುವ ಮಾಹಿತಿಯನ್ನೂ ಪಡೆದು ಗುರುತು ಮಾಡಿಕೊಂಡಿದ್ದೇವೆ. ಈ ಪ್ರಸ್ತಾವನೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆಯುವ ಅಗತ್ಯವಿದೆ. ನಮ್ಮ ಕಡೆಯಿಂದ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು ಎಂದು ಸಭೆಗೆ ತಿಳಿಸಿದರು.

ಪಶುಸಂಗೋಪನೆ, ರೇμÉ್ಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಹೆಚ್.ಎಂ. ಗಣೇಶ್‍ಪ್ರಸಾದ್, ಡಾ. ಡಿ. ತಿಮ್ಮಯ್ಯ, ಸಹಕಾರ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥ್ ಪ್ರಸಾದ್, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪದ್ಮಿನಿ ಸಾಹು, ವಿವಿಧ ಇಲಾಖೆಗಳ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *