ಕುಡಿಯುವ ನೀರಿನ ಜಲಸಂಗ್ರಹಗಾರ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ಅಮೃತ್-2.0 ಕಾರ್ಯಕ್ರಮದಡಿ ಕುಡಿಯುವ ನೀರು ಯೋಜನೆಯ 1 ಕೋಟಿ 20 ಲಕ್ಷ ವೆಚ್ಚದ ಜಲಸಂಗ್ರಹಗಾರ (ವಾಟರ್ ಟ್ಯಾಂಕ್) ನಿರ್ಮಾಣ ಕಾಮಗಾರಿಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಗುದ್ದಲಿಪೂಜೆ ನೆರವೇರಿಸಿದರು.

ನಗರದ ರಾಮಸಮುದ್ರ ಬಡಾವಣೆಯಲ್ಲಿಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಪುರಸ್ಕøತ ಅಮೃತ್-20. ಕಾರ್ಯಕ್ರಮದಡಿ ಚಾಮರಾಜನಗರ ನೀರು ಸರಬರಾಜು ವ್ಯವಸ್ಥೆಯ ಸುಧಾರಣೆ ಯೋಜನೆ ಕಾರ್ಯಕ್ರಮದಲ್ಲಿ 15 ಲಕ್ಷ ಲೀ. ಸಂಗ್ರಹ ಸಾಮಥ್ರ್ಯದ ಜಲಸಂಗ್ರಹಗಾರ ಕಾಮಗಾರಿಗೆ ಶಾಸಕರು ಭೂಮಿಪೂಜೆ ಮಾಡಿ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದ ನಾಗರಿಕರಿಗೆ ಸಿ.ಪಿಎಚ್.ಇ.ಇ.ಒ ಮಾನದಂಡಗಳಿಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸುವ ಯೋಜನೆಯನ್ನು ಕೇಂದ್ರ ಪುರಸ್ಕøತ ಅಮೃತ್-2.0 ಕಾರ್ಯಕ್ರಮದಡಿ ಕೈಗೆತ್ತಿಕೊಳ್ಳಲಾಗಿದೆ. ಹಾಗೇಯೇ ಜಿಲ್ಲಾಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ರಾಮಸಮುದ್ರ ಬಡಾವಣೆಯಲ್ಲಿ ಈ ಹಿಂದೆ ಇದ್ದ ಜಲಸಂಗ್ರಹಗಾರ (ವಾಟರ್ ಟ್ಯಾಂಕ್) ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿತ್ತು. ಪ್ರಸ್ತುತ ಶಿಥಿಲಗೊಂಡಿದ್ದ ಹಳೇ ಟ್ಯಾಂಕ್ ಅನ್ನು ಕೆಡವಿ ಅದೇ ಜಾಗದಲ್ಲಿ 15 ಲಕ್ಷ ಲೀ. ನೀರು ಸಂಗ್ರಹ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭಾ ಸದಸ್ಯರಾದ ನಂಜುಂಡಸ್ವಾಮಿ, ಎಂ.ಆರ್. ರಾಜಪ್ಪ, ಮಾಜಿ ಸದಸ್ಯರಾದ ನಾಗರಾಜು, ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *