ಕೆಲ್ಲಂಬಳ್ಳಿ- ಬದನಗುಪ್ಪೆ ಗ್ರಾಮಗಳ ಸಂತ್ರಸ್ತ ರೈತರಿಂದ ಡಿಸಿಎಂಗೆ ಮನವಿ

ರೈತರ ಅಪೇಕ್ಷೆಯಂತೆ ಭೂಸ್ವಾಧೀನ ಪಡಿಸಿಕೊಳ್ಳಲು ರೈತರ ಒತ್ತಾಯ
ಚಾಮರಾಜನಗರ: ತಾಲೂಕಿನ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶಾಭಿವೃದ್ದಿಗಾಗಿ ಸ್ವಾಧೀನ ಪಡಿಸಿಕೊಂಡಿರುವ ಸಂತ್ರಸ್ತ ರೈತರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೊರ ವಲಯದಲ್ಲಿರುವ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಟೆಕ್ರೇನ್ ಬ್ಯಾಟರಿ ಲಿಮಿಡೆಟ್‌ನ್ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿಗಳನ್ನು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ, ಗ್ರಾ.ಪಂ. ಸದಸ್ಯ ಹಾಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮಶೇಖರ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಈಗಾಗಲೇ ಬದನಗುಪ್ಪೆ-ಕೆಲ್ಲಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ೮೩೮.೨೯ ಎಕರೆ ಪ್ರದೇಶವನ್ನು ಜಮೀನುಗಳನ್ನು ೨ನೇ ಹಂತದ ಕೈಗಾರಿಕೆ ಪ್ರದೇಶದ ಅಭಿವೃದ್ದಿಗಾಗಿ ಜ. ೨೯, ೨೦೨೨ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಲಿಯವರು ಆಧಿಸೂಚನೆ ಹೊರಡಿಸಿ, ನಿಗಧಿ ಪ್ರದೇಶಗಳಲ್ಲಿ ರೈತರು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳದೇ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದು, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜೂ.೫ ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಸಮ್ಮುಖದಲ್ಲಿ ಭೂ ದರ ನಿಗಧಿಯಾಗಿ ಭೂ ಮಾಲೀಕರ ಸಭೆಯನ್ನು ನಡೆಸಲಾಗಿದೆ. ಅಂದಿನ ಸಭೆಯಲ್ಲಿ ರೈತರ ನಿರೀಕ್ಷೆಯಂತೆ ಯಾವುದೇ ದರ ನಿಗಧಿಪಡಿಸಲಿಲ್ಲ.

ಇದುವರೆಗೆ ಯಾವುದೇ ರೀತಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿಲ್ಲ. ರೈತರಿಗೆ ನಿಗದಿತ ದರವನ್ನು ಘೋಷಣೆ ಮಾಡಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ತುರ್ತು ಸಭೆ ಕರೆದು ರೈತರ ಆಪೇಕ್ಷೆಯಂತೆ ದರ ನಿಗಧಿಪಡಿಸಿ, ಭೂಸ್ವಾಧಿನ ಪಡಿಸುವ ಮೂಲಕ ರೈತರಿಗೆ ತಕ್ಷಣ ಪರಿಹಾರ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.

ಈ ಸಂದರ್ಭದಲ್ಲಿ ಭೋಗಾಪುರ ಗ್ರಾ.ಪಂ. ಅಧ್ಯಕ್ಷೆ ರೂಪ, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ನಂಜುಂಡಸ್ವಾಮಿ, ರಾಜೇಶ್, ಗ್ರಾಮಸ್ಥರಾದ ಮಾಸ್ಟರ್ ಮಹದೇವಮೂರ್ತಿ, ಗುರುಸಿದ್ದಯ್ಯ, ನಾಗೇಶ್, ನಾಗರಾಜಪ್ಪ, ಬದನಗುಪ್ಪೆ ಶಿವಪಾದಪ್ಪ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *