ಚಾಮರಾಜನಗರ: ಮೈಸೂರಿನಲ್ಲಿ ಆಗಸ್ಟ್ ೩೦ರಂದು ನಡೆಯಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಚಾಲನೆಯ ಬೃಹತ್ ಸಮಾರಂಭಕ್ಕೆ ಚಾಮರಾಜನಗರ ಜಿಲ್ಲೆಯಿಂದ ಫಲಾನುಭವಿಗಳನ್ನು ಕರೆದೊಯ್ಯಲು ಕೈಗೊಂಡಿರುವ ಸಿದ್ದತೆಗಳನ್ನ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಇಂದು ಪರಿಶೀಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲಾ, ತಾಲೂಕು ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೊಂದಿಗೆ ಜೂಮ್ ಸಭೆಯ ಮೂಲಕ ಪೂರ್ವ ಸಿದ್ದತೆಗಳನ್ನು ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿದರು.
ಈಗಾಗಲೇ ನೇಮಕವಾಗಿರುವ ತಾಲೂಕು, ಹೋಬಳಿ ಹಾಗೂ ಇನ್ನಿತರ ವಿವಿಧ ಹಂತದ ನೋಡಲ್ ಅಧಿಕಾರಿಗಳು ಫಲಾನುಭವಿಗಳನ್ನು ಕರೆತರುವ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಿಗದಿತ ಸಮಯಕ್ಕೆ ಬಸ್ಸುಗಳು ಬರಲಿದ್ದು ಕಾರ್ಯಕ್ರಮದ ವೇಳೆಗೆ ಫಲಾನುಭವಿಗಳು ಭಾಗವಹಿಸಲು ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಫಲಾನುಭವಿಗಳಿಗೆ ಉತ್ತಮ ಉಪಹಾರ, ಊಟ, ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಸಮರ್ಪಕವಾಗಿ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿವಾರು ಬಸ್ಸುಗಳಿಗೆ ನೇಮಕವಾದ ಅಧಿಕಾರಿ ಸಿಬ್ಬಂದಿ ಫಲಾನುಭವಿಗಳಿಗೆ ಬಸ್ಸು ಬರುವ ಹಾಗೂ ಹೊರಡುವ ಸಮಯದ ಮಾಹಿತಿಯನ್ನು ತಿಳಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶವಾಗದ ಹಾಗೆ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾತನಾಡಿ ಫಲಾನುಭವಿಗಳನ್ನು ಕರೆತರುವ ಬಸ್ಸುಗಳ ಮಾರ್ಗಗಳ ಮಾಹಿತಿ ಒಳಗೊಂಡ ರೂಟ್ ಮ್ಯಾಪ್ ಪ್ರಕಾರ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಬಸ್ಸುಗಳ ನಿಲುಗಡೆ ಸ್ಥಳ ಕುರಿತು ಮಾಹಿತಿ ಫಲಾನುಭವಿಗಳಿಗೆ ನೀಡಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ , ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಗೀತಾ ಲಕ್ಷ್ಮಿ, ಕೆಎಸ್.ಆರ್.ಟಿಸಿ, ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು, ಆಯುಕ್ತರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.