ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಸೂಚನೆ : ಅಧೀಕ್ಷಕ ಇಂಜಿನಿಯರ್ ಸೋಮಶೇಖರ್

ಹರದನಹಳ್ಳಿಯಲ್ಲಿ ಸೆಸ್ಕಾಂ ಜನ ಸಂಪರ್ಕ ಸಭೆ
ಚಾಮರಾಜನಗರ: ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೊರೈಕೆ ಮಾಡುವ ಮೂಲಕ ದೂರು ಬರದಂತೆ ಕ್ರಮ ವಹಿಸಿ, ಕಮರ್ಷಿಯಲ್ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಸಮರ್ಪಕ ಹಾಗೂ ನಿಯಮಿತವಾಗಿ ವಿದ್ಯುತ್ ನೀಡುವಂತೆ ಚಾ.ನಗರ- ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ ಎಂ.ಕೆ. ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಹರದನಹಳ್ಳಿ ಉಪ ವಿಭಾಗದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ನಡೆದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಹಕರಿಂದ ಬಂದ ದೂರುಗಳನ್ನು ಆಲಿಸಿದರು. ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಬೇಸಿಗೆ ಕಾಲ ಸಮೀಪಿಸುತ್ತಿದೆ. ರೈತರ ಕೃಷಿ ಪಂಪ್ ಸೆಟ್‍ಗಳು, ಕೈಗಾರಿಕೆಗಳು ಹಾಗೂ ಸಣ್ಣ ಕೈಗಾರಿಕೆಗಳು ಹಾಗೂ ವ್ಯಾಪಾರಸ್ಥರಿಗೆ ಸಮರ್ಪಕವಾಗಿ ವಿದ್ಯುತ್ ಪೊರೈಕೆ ಮಾಡಲು ಸೆಸ್ಕಾಂ ಸಿಬ್ಬಂದಿಗಳು ಕ್ರಮ ವಹಿಸಬೇಕು. ವಿದ್ಯುತ್ ಸಮಸ್ಯೆಗಳು ಕಂಡಬಂದ ತಕ್ಷಣ ಸ್ಪಂದಿಸಿ, ಸರಿಪಡಿಸುವ ಮೂಲಕ ಅವಘಡಗಳನ್ನು ತಪ್ಪಿಸಿ, ಯಾವುದೇ ದೂರನ್ನು ನಿರ್ಲಕ್ಷ್ಯ ಮಾಡಬೇಡಿ. ಸಿಬ್ಬಂದಿಗಳು 24*7 ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.

ವಿಭಾಗದ ವ್ಯಾಪ್ತಿಯಲ್ಲಿ ಜೋತು ಬಿದ್ದಿರುವ ಹಾಗೂ ಶಿಥಿಲಗೊಂಡಿರುವ ತಂತಿಗಳನ್ನು ಬದಲಾಯಿಸಿ ಹೊಸ ಲೈನ್‍ಗಳನ್ನು ಅಳವಡಿಸಲು ಕ್ರಮ ವಹಿಸಿ, ಅಲ್ಲದೇ ವಿದ್ಯುತ್ ಕಂಬ, ಟಿಸಿ ಹಾಗೂ ಇತರೇ ಲೈನ್‍ಗಳನ್ನು ಬೆಳೆದಿರುವ ಜಂಗಲ್ ಹಾಗೂ ಗಿಡ ಬಳ್ಳಿಗಳನ್ನು ತೆರವು ಮಾಡಿ, ಅಡಚಣೆಯಾಗದಂತೆ ವಿದ್ಯುತ್ ಪೊರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಹರವೆ ಗ್ರಾಮದ ಮಂಜುನಾಥ್ ಎಂಬುವರು ದೂರು ನೀಡಿ, ನಮ್ಮಲ್ಲಿ ಕ್ರಷರ್ ಇದ್ದು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ಸಂಜೆ ವೇಳೆ ಕರೆಂಟ್ ಹೋದರೆ ಬೆಳಗಿನ ವರೆಗೂ ವಿದ್ಯುತ್ ಸರಬರಾಜು ಆಗುತ್ತಿಲ್ಲ, ಇದರಿಂದ ಕ್ರಷರ್ ರಿಂದ ಉತ್ಪನ್ನಗಳಿಗೆ ತೊಂದರೆಯಾಗುತ್ತಿದೆ. ಸರಿಯಾಗಿ ವಿದ್ಯುತ್ ಬಿಲ್ ಪಾವತಿ ಮಾಡಿದರು ಸಹ ವ್ಯತ್ಯಯವಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧೀಕ್ಷಕ ಇಂಜಿನೀಯರ್ ಕೂಡಲೇ ಕ್ರಮ ವಹಿಸಬೇಕೆಂದು ಶಾಖಾ ಇಂಜನೀಯರ್‍ಗೆ ಸೂಚಿಸಿದರು.

ಅಟ್ಟುಗುಳಿಪುರ ಗ್ರಾಮದ ತಂಗವೇಲು ಅವರು ಮಾತನಾಡಿ, ನಾನು ಕ್ರಯಕ್ಕೆ ಪಡೆದಿರುವ ಮನೆಗೆ ಭಾಗ್ಯಜ್ಯೋತಿ ಕಲ್ಪಿಸಲಾಗಿದ್ದು, ಈಗ ನನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಅನೇಕ ಭಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರಿಗೆ ಉತ್ತರಿಸಿದ ಅಧೀಕ್ಷಕ ಇಂಜಿನಿಯರ್ ಸರ್ಕಾರ ಗೃಹಜ್ಯೋತಿ ಜಾರಿಗೆ ತಂದಿದ್ದು ಹಾಲಿ ಇರುವ ಸಂಪರ್ಕ ಕಡಿತಗೊಳಿಸಿ ಹೊಸ ಸಂಪರ್ಕ ಪಡೆಯುವಂತೆ ಸಲಹೆ ನೀಡಿದರು. ಮುತ್ತುರಾಜು ಮಾತನಾಡಿ ವಿದ್ಯುತ್ ಕಂಬಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೃಪದ್, ಹರದನಹಳ್ಳಿ ಶಾಖಾಧಿಕಾರಿಗಳಾದ ಎನ್. ವಸಂತ್‍ಕುಮಾರ್, ನವೀನ್, ಸತೀಶ್, ಕಂದಾಯ ಹಿರಿಯ ಸಹಾಯಕ ಮಹದೇವಸ್ವಾಮಿ ಇತರರು ಇದ್ದರು.

Leave a Reply

Your email address will not be published. Required fields are marked *