ಚಾಮರಾಜನಗರ: ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಗೌರವಾಧ್ಯಕ್ಷೆ ನರ್ಗೀಸ್‍ಭಾನು ಎಂದು ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂತನವಾಗಿ ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್ ಅನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಇಂದು ಸಸಿಯನ್ನು ನೆಟ್ಟಂತಾಗಿದೆ. ಮುಂದಿನ ದಿನಗಳಲ್ಲಿ ಸಸಿಗೆ ಸರಿಯಾದ ನೀರು, ಗೊಬ್ಬರ ಹಾಕಿ ಪೋಷಿಸುವ ಹಾಗೆ ಅಸೋಸಿಯೇಷನ್ ಅನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿಯಂತೆ ಈ ಅಸೋಸಿಯೇಷನ್‍ನ ಪ್ರಾರಂಭಕ್ಕೆ ಎಲ್ಲ ಶಿಕ್ಷಕರುಗಳು ಸಮಾನ ಮನಸ್ಥಿತಿಯಿಂದ ಕೈ ಜೋಡಿಸುವ ಮೂಲಕ ಪ್ರಥಮ ಹೆಜ್ಜೆಯನ್ನಿಟ್ಟಿದ್ದೀರಾ. ಈ ಹೆಜ್ಜೆ ಶಾಶ್ವತವಾಗಿ ಉಳಿದು, ಜಿಲ್ಲೆ, ರಾಜ್ಯ, ದೇಶಾದ್ಯಂತ ಉತ್ತಮ ಹೆಸರು ಗಳಿಸಲಿ. ಇದರ ಬೆಳವಣಿಗೆಗೆ ನನ್ನ ಸಹಕಾರ ಯಾವಾಗಲು ಇರುತ್ತದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಿಗೆ ಈ ಕ್ರೀಡೆಯನ್ನು ಪರಿಚಯಿಸುವ ಕೆಲಸವಾಗಬೇಕು. ಈ ಆಟದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಅವರಿಗೆ ಉತ್ತಮ ತರಬೇತಿ ನೀಡಿ ಅವರ ಪ್ರತಿಭೆಯನ್ನು ಹೊರಚೆಲ್ಲುವಂತಹ ಕೆಲಸ ಮಾಡಬೇಕು ಎಂದರು.
ಎಲ್ಲಾ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಈ ಕ್ರೀಡೆಯಲ್ಲಿ ಆಸಕ್ತಿ ಇರುವ ಎಲ್ಲಾ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಿ, ಅವರಿಗೆ ಕೀಡಾ ಇಲಾಖೆಯಿಂದ ಸಿಗುವಂತಹ ಎಲ್ಲಾ ರೀತಿಯ ಪ್ರೋತ್ಸಾಹ ಹಾಗೂ ಸವಲತ್ತನ್ನು ಒದಗಿಸುವಂತಹ ಎಲ್ಲಾ ರೀತಿಯ ಸಹಕಾರವನ್ನು ಕಲ್ಪಿಸಿಕೊಡುವಂತ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದರು.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ನಮ್ಮ ಅಸೋಸಿಯೇಷನ್‍ನ ಪದಾಧಿಕಾರಿಗಳಾಗಿರುವುದು ಸಂತಸದ ವಿಷಯ. ಎಲ್ಲರ ಸಹಕಾರದೊಂದಿಗೆ ಅಸೋಸಿಯೇಷನ್ ಅನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವಾಗಬೇಕು. ಇದರ ಜೊತೆಗೆ ನನ್ನ ಸಹಕಾರ ಯಾವಾಗಲು ಇರಲಿದ್ದು, ಕ್ರೀಡಾ ಉತ್ತೇಜನಕ್ಕೆ ಬೇಕಾದಂತಹ ಎಲ್ಲಾ ಕೆಲಸವನ್ನು ಮಾಡಲಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ನರ್ಗೀಸ್‍ಭಾನು ಅವರನ್ನು ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ರಾಜೇಂದ್ರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಸೋಸಿಯೇಷನ್ ಪ್ರಾರಂಭಿಸಲಾಗಿದ್ದು, ಇದರಿಂದ ಜಿಲ್ಲೆಗೆ ಹೆಚ್ಚು ಕೀರ್ತಿ ಸಿಗಲಿ, ಎಲ್ಲರೂ ಇದಕ್ಕೆ ಬೆನ್ನೆಲುಬಾಗಿ ನಿಲ್ಲೋಣ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್.ಬಿ. ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಯಲ್ಲೂ ಪಾಲ್ಗೊಳ್ಳುವಂತಾಗಬೇಕು. ಬಾಸ್ಕೆಟ್ ಬಾಲ್ ನಂತಹದ್ದೇ, ನೆಟ್ ಬಾಲ್ ಕೂಡಾ ಒಂದು ಕ್ರೀಡೆ. ಇದು ಕೂಡಾ ಸಾಕಷ್ಟು ಜನಪ್ರಿಯತೆಯನ್ನು ಕಂಡಿದೆ. ಇದರಲ್ಲಿ ರನ್ನಿಂಗ್, ಜಂಪಿಂಗ್ ಹೀಗೆ ಸಾಕಷ್ಟು ದೈಹಿಕ ಶ್ರಮ ಇರುತ್ತದೆ. 2018ರ ಅಥ್ಲೆಟಿಕ್‍ನಲ್ಲಿ ನನ್ನ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತ್ತು. ಮುಂದಿನ ದಿನಗಳಲ್ಲೂ ಜಿಲ್ಲೆಯಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.

ಸಂಘಟನಾ ಕಾರ್ಯದರ್ಶಿ ಮಧುಕುಮಾರ್ ಸಿ.ಎಂ., ಮಾತನಾಡಿ, ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಕಲಿಕೆಗೆ ಪ್ರಯತ್ನಿಸಬೇಕು. ಮಕ್ಕಳಲ್ಲಿರುವ ಕೌಶಲ್ಯವನ್ನು ಹೊರತರುವಂತಹ ಕೆಲಸವಾಗಬೇಕು ಎಂದರು.

ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಜಿ. ಮಾತನಾಡಿ, ಕಳೆದ ಬಾರಿ ಕ್ರೀಡೆಯಲ್ಲಿ ಅಂಡರ್19ನಲ್ಲಿ ಚಾಮರಾಜನಗರದ ವಿದ್ಯಾರ್ಥಿ ಕ್ಯಾಪ್ಟನ್ ಆಗಿದ್ದು, ಇಡೀ ಚಾಮರಾಜನಗರವೇ ತಿರುಗಿ ನೋಡುವಂತೆ ಮಾಡಿದ್ದಾನೆ. ಈ ಕ್ರೀಡೆಯಲ್ಲಿ ಆಸಕ್ತಿ ಇರುವ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಮುನ್ನೆಲೆಗೆ ತರುವಂತಹ ಕೆಲಸ ನಮ್ಮ ಅಸೋಷಿಯೇಷನ್ ವತಿಯಿಂದ ಮಾಡಬೇಕು ಎಂದರು.

ವಿಶೇಷ ಆಹ್ವಾನಿತರಾಗಿದ್ದ ಚಾಮುಲ್‍ನ ಗುಣ, ಭರವಸೆ ವಿಭಾಗದ ತಾಂತ್ರಿಕ ಅಧಿಕಾರಿ ಅಲಿಖಾನ್ ಸಾಹೇಬ್ ಮಾತನಾಡಿ, ಕೆಲವು ಮಕ್ಕಳಿಗೆ ಸಾಮಥ್ರ್ಯ ಇದ್ದರೂ, ದಾರಿ ಇರುವುದಿಲ್ಲ. ಈ ಅಸೋಸಿಯೇಷನ್ ಅವರನ್ನು ದಾರಿ ತೋರಿಸುವ ಮೂಲಕ ಅವರ ಗುರಿ ಮುಟ್ಟುವಂತೆ ಮಾಡಬೇಕು. ಸಾಧ್ಯವಾದಷ್ಟು ಈ ಕ್ರೀಡೆಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ನಡೆಸುವಂತೆ ಸಲಹೆ ನೀಡಿದರು.
ನಂತರ ಸಂಘದ ಎಲ್ಲಾ ಪದಾಧಿಕಾರಿಗಳು ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜೇಂದ್ರ ಸಿ., ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್.ಬಿ., ಸಹ ಕಾರ್ಯದರ್ಶಿ ಸುರೇಶ್‍ಕುಮಾರ್ ಜಿ., ಸದಸ್ಯರಾದ ಲೋಕೇಶ್.ಎನ್., ಅಕ್ಷಯ್ ಸಿ.ಎಸ್, ನಾಗೇಂದ್ರ ಸಿ, ಶ್ರೀಧರ್, ಸೇರಿದಂತೆ ಇನ್ನಿತರರು ಇದ್ದರು. ಸಂಘಟನಾ ಕಾರ್ಯದರ್ಶಿ ಮಧುಕುಮಾರ್ ಸಿ.ಎಂ. ಸ್ವಾಗತ ಭಾಷಣ ಮಾಡಿದರು.