ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವಕ್ಕೆ ಇಂದು ಸಂಭ್ರಮದ ಚಾಲನೆ ದೊರೆಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಮರಿತಿಬ್ಬೇಗೌಡ, ಇತರೆ ಗಣ್ಯರು ವಿಶೇಷ ಪೂಜಾ ಕೈಂಕರ್ಯ ಕಾರ್ಯ ನೆರವೇರಿಸಿ ದಸರಾ ಮಹೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ಚಾಲನೆ ನೀಡಿದರು.

ಬೆಳಿಗ್ಗೆ ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಆಗಮಿಸಿದ ಗಣ್ಯರು ಮೊದಲು ಚಾಮರಾಜೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ದೇವಾಲಯದ ಗರ್ಭಗುಡಿಯಲ್ಲಿರುವ ಉತ್ಸವಮೂರ್ತಿಯ ಜ್ಯೋತಿ ಬೆಳಗಿಸಿದರು. ಶ್ರೀ ಚಾಮುಂಡೇಶ್ವರಿ, ಶ್ರೀ ಕೆಂಪನಂಜಾಂಬ ದೇವಿ ಅಮ್ಮನವರಿಗೂ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ನಂದಿಧ್ವಜ ಕಂಬಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಬಳಿಕ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಗೆ ಸ್ವತಹ: ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಚಿತ್ರಕಲಾ ಪ್ರದರ್ಶನಕ್ಕೂಚಾಲನೆ ನೀಡಿದರು. ಅಲ್ಲದೆ ದೇವಾಲಯದ ಉದ್ಯಾನವನದಲ್ಲಿರುವ ತಾಯಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದರು.

ತದನಂತರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಚಾಮರಾಜನಗರ ದಸರಾ ಮಹೋತ್ಸವದ ಮುಖ್ಯ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ನಗಾರಿ ಬಾರಿಸಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಜಿಲ್ಲೆಯಲ್ಲಿ 10ನೇ ಬಾರಿಗೆ ಆಚರಿಸಲಾಗುತ್ತಿರುವ ಚಾಮರಾಜನಗರ ದಸರಾ ಮಹೋತ್ಸವದ ಈ ದಿನ ಇತಿಹಾಸದ ಪರಂಪರೆಯ ಗತವೈಭವ ಮರುಕಳಿಸುವ ಸುದಿನವಾಗಿದೆ. ಮೊದಲು ವಿಜಯನಗರದಲ್ಲಿ ಆರಂಭವಾದ ದಸರಾ ವೈಭವವನ್ನು ಬಳಿಕ ಮೈಸೂರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರಿನಿಂದ ಪ್ರತ್ಯೇಕ ಜಿಲ್ಲೆಯಾಗಿ ವಿಭಜನೆ ನಂತರ ಮೈಸೂರಿನ ಮಾದರಿಯಲ್ಲಿ ಚಾಮರಾಜನಗರದಲ್ಲಿಯೂ ದಸರಾ ಆಯೋಜಿಸುತ್ತಿದ್ದು, ಇದು ಬಾಂಧವ್ಯ ಬೆಸೆಯುವ ಕೊಂಡಿಯಾಗಿದೆ ಎಂದರು.

ಈ ಬಾರಿ ರಾಜ್ಯದೆಲ್ಲೆಡೆ ಮಳೆ ಕಡಿಮೆಯಾಗಿ ಬರಗಾಲ ಎದುರಾಗಿದೆ. ಬರ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯುವ ನೀರು, ವಿದ್ಯುತ್ ಅಭಾವದೊಂದಿಗೆ ಅನೇಕ ಸಮಸ್ಯೆಗಳು ತಲೆದೋರಿದೆ. ಜನಸಾಮಾನ್ಯರು ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರಳ ದಸರಾ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ ಸಂಕಷ್ಟ ನಿವಾರಣೆಗೆ ಚಾಮರಾಜೇಶ್ವರನಲ್ಲಿ ಪ್ರಾರ್ಥಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ತಿಳಿಸಿದರು.

ಶಾಸಕರಾದ ಮರಿತಿಬ್ಬೇಗೌಡ ಅವರು ಮಾತನಾಡಿ ನಾಲ್ಕು ದಿನಗಳ ಕಾಲ ನಡೆಯುವ ಚಾಮರಾಜನಗರ ದಸರಾ ಮಹೋತ್ಸವದಲ್ಲಿ ನಮ್ಮ ಬದುಕಿನ ಅನುಭವ, ಕಲೆ, ಸಂಸ್ಕøತಿ, ಸಾಹಿತ್ಯ, ಸಂಗೀತ, ಕ್ರೀಡೆ, ಇತರೆ ದಸರಾ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ಆಯೋಜಿಸಿದೆ. ಕಾರ್ಯಕ್ರಮಗಳನ್ನು ಎಲ್ಲರೂ ನೋಡಿ ವೀಕ್ಷಿಸಿ ಕಣ್ತುಂಬಿಕೊಳ್ಳಬೇಕು. ಆ ಮೂಲಕ ದಿನನಿತ್ಯದ ಜೀವನದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಕೂಡಿ ಬಾಳುವ ಹೊಸತನ ರೂಢಿಸಿಕೊಳ್ಳಬೇಕು. ಅದೇ ದಸರಾಗೆ ನೀಡುವ ದೊಡ್ಡ ಕೊಡುಗೆಯಾಗಿದೆ ಎಂದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಸದಸ್ಯರಾದ ಚಿನ್ನಮ್ಮ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ನಗರಸಭೆ ಪೌರಾಯುಕ್ತರಾದ ರಾಮದಾಸ್, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *