ಚಾಮರಾಜನಗರ: ಫ್ರೂಟ್ಸ್ (FRUITS) ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆವಿಮೆ, ಬೆಳೆಸಾಲ, ಬೆಳೆ ಪರಿಹಾರ ವಿತರಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನ, ಬೆಳೆ ದಾಖಲಾತಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ವಿತರಣೆಗೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟಾರೆ 4,41,547 ಫ್ಲಾಟ್ (ಸರ್ವೆ ನಂಬರ್)ಗಳಿದ್ದು, ಈವರೆಗೂ 2,31,001 ಫ್ಲಾಟ್‍ಗಳನ್ನು (ಶೇ.52.3) ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದ್ದು, ಬಾಕಿ 2,10,546 (ಶೇ.47.7) ಫ್ಲಾಟ್‍ಗಳನ್ನು ಜೋಡಿಸಬೇಕಿದೆ. ಸದರಿ ಕಾರ್ಯವನ್ನು ಕ್ಷೇತ್ರ ಮಟ್ಟದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಇಲಾಖೆಗಳ ಲಾಗಿನ್‍ಗಳ ಮೂಲಕ ಮುಂದಿನ 15 ದಿನಗಳ ಅವಧಿಯಲ್ಲಿ ಅಭಿಯಾನ ರೂಪದಲ್ಲಿ ಕೈಗೊಂಡು ಫ್ರೂಟ್ಸ್ ತಂತ್ರಾಂಶದಲ್ಲಿ ಪೂರ್ಣಪ್ರಮಾಣದಲ್ಲಿ ಲ್ಯಾಂಡ್ ಅಪ್‍ಡೇಷನ್ ಪ್ರಗತಿ ಸಾಧಿಸಲು ಸರ್ಕಾರದ ನಿರ್ದೇಶನವಿದೆ.
ಫ್ರೂಟ್ಸ್ (FRUITS ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಸಾಲ, ಬೆಳೆ ಪರಿಹಾರ ವಿತರಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನ, ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಸರ್ಕಾರದ ವಿವಿಧ ಸೌಲಭ್ಯ ವಿತರಣೆಗೆ ಬಳಕೆ ಮಾಡುತ್ತಿದ್ದು, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಸಹಕಾರ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಸದರಿ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಫ್ರೂಟ್ಸ್ ತಂತ್ರಾಂಶದಲ್ಲಿ (Farmer Registration and Unified beneficiary Information System) ಜಿಲ್ಲೆಯ ರೈತರ ಎಲ್ಲಾ ಜಮೀನಿನ ಮಾಹಿತಿಯನ್ನು ಮುಂದಿನ 15 ದಿನದೊಳಗೆ ದಾಖಲಿಸಲು ಸರ್ಕಾರ ನಿರ್ದೇಶನ ನೀಡಿದೆ. ಬರಗಾಲದಿಂದ ಉಂಟಾದ ಬೆಳೆ ನಷ್ಟಕ್ಕೆ ದೊರೆಯುವ ಪರಿಹಾರವು ಫ್ರೂಟ್ಸ್ ತಂತ್ರಾಂಸದ ದಾಖಲೆಯನ್ವಯ ರೈತರ ಖಾತೆಗೆ ನೇರವಾಗಿ ಮುಂದಿನ ದಿನಗಳಲ್ಲಿ ಜಮೆಯಾಗಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ತ ರೈತ ಬಾಂಧವರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್‍ಖಾತೆ ಮತ್ತು ಶಾಖೆಯ ವಿವರ, ಐಎಫ್‍ಎಸ್‍ಸಿ ಕೋಡ್, ಮೊ.ಸಂಖ್ಯೆ, ಪರಿಶಿಷ್ಟಜಾತಿ, ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲಿಕತ್ವದ ಎಲ್ಲಾ ಜಮೀನಿನ ಸರ್ವೆ ನಂಬರ್‍ಗಳ ವಿವರಗಳನ್ನು ಹತ್ತಿರದ ತಹಶೀಲ್ದಾರ್ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಅಥವಾ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಸಹಕಾರ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ಮಾಲಿಕತ್ವದ ಎಲ್ಲಾ ಪಹಣಿಯ ದಾಖಲೆಗಳನ್ನು 15 ದಿನಗಳೊಳಗೆ ನೀಡಿ ನೋಂದಾಯಿಸಿಕೊಳ್ಳಬೇಕು.
ಸದರಿ ಮಾಹಿತಿಯನ್ನು ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ನೀಡಲು ಮಾತ್ರ ಬಳಕೆ ಮಾಡುವುದರಿಂದ ರೈತರು ನಿರ್ಭೀತಿಯಿಂದ ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.