ಚಾಮರಾಜನಗರ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಉಂಟಾಗದಂತೆ ರೈತರು ತಮ್ಮ ಬಳಿ ಲಭ್ಯವಿರುವ ಮೇವು ಹಾಗೂ ಮುಂದಿನ ದಿನಗಳಲ್ಲಿ ಬೆಳೆಯುವ ಮೇವನ್ನು ಸಂರಕ್ಷಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದ್ದಾರೆ.
2023-24ನೇ ಸಾಲಿನಲ್ಲಿ ನೈರುತ್ಯ ಮುಂಗಾರು ಕೊರತೆಯಿಂದಾಗಿ ಜಿಲ್ಲೆಯ 5 ತಾಲೂಕುಗಳನ್ನು ತೀವ್ರ/ಸಾಧರಣ ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟಾರೆ 20ನೇ ಜಾನುವಾರು ಗಣತಿ ಪ್ರಕಾರ ಒಟ್ಟು 2,59,279 ದನ, ಕರು, ಎಮ್ಮೆಗಳಿದ್ದು ಹಾಗೂ ಒಟ್ಟು 2,78,199 ಕುರಿ, ಮೇಕೆಗಳು ಇವೆ. ಈ ಎಲ್ಲಾ ರಾಸುಗಳಿಗೆ ಜಿಲ್ಲೆಯಲ್ಲಿ ಒಟ್ಟು 20 ವಾರಕ್ಕೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ. ಮುಂದಿನ ದಿನಗಳಲ್ಲಿ ವಾರಕ್ಕೆ 11,870 ಮೆಟ್ರಿಕ್ ಟನ್ ಮೇವು ಲಭ್ಯತೆ ಬೇಕಾಗಿರುವುದರಿಂದ 6 ತಿಂಗಳಿಗೆ ಒಟ್ಟು 2,84,880 ಮೆಟ್ರಿಕ್ ಟನ್ ಮೇವು ಅವಶ್ಯಕತೆ ಇರುತ್ತದೆ.
ಜಿಲ್ಲೆಯ ರೈತರು ಕೃಷಿ ಜಮೀನಿನಲ್ಲಿ ಬೆಳೆಯುವ ಧಾನ್ಯಗಳ ಕಟಾವಣೆಯಾದ ನಂತರ ಜಾನುವಾರುಗಳಿಗೆ ತಿನ್ನಲು ಯೋಗ್ಯವಾದ ಭತ್ತ, ಮುಸುಕಿನ ಜೋಳ, ಜೋಳ, ಗೋಧಿ, ರಾಗಿ, ಬಾಜ್ರಾ, ಕಡಲೆಕಾಯಿ, ಸಿರಿಧಾನ್ಯ, ಎಲ್ಲಾ ದ್ವಿದಳ ಧಾನ್ಯದ ಬೆಳೆಗಳಾದ ಅವರೆ, ಉದ್ದು, ಅಲಸಂದೆ, ತೊಗರಿ, ಹೆಸರುಬೇಳೆ, ಕಡಲೆಕಾಳು, ಹುರುಳಿ ಮುಂತಾದ ಬೆಳೆಗಳ ಹುಲ್ಲುಗಳನ್ನು ಒಣವೆ ಹಾಕಿ ಸಂರಕ್ಷಿಸಿಕೊಳ್ಳಬೇಕು.
ರೈತರು ಮೇವನ್ನು ಸುಡದೆ ಮಳೆ ನೀರಿನಿಂದ ಕೊಳೆತು ಹೋಗದಂತೆ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳಬೇಕು. ಒಂದು ವೇಳೆ ತಮ್ಮ ಬಳಿ ಇರುವ ಜಾನುವಾರುಗಳಿಗೆ ಬೇಕಾದ ಮೇವಿನ ಪ್ರಮಾಣಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚಿನ ಮೇವಿನ ಪ್ರಮಾಣ, ದರ, ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರಿಗೆ ಮೇವಿನ ಅಭಾವ ಉಂಟಾದಲ್ಲಿ ತಮ್ಮ ವಿಳಾಸವನ್ನು ಅವರಿಗೆ ನೀಡಿ ಅವರಿಂದ ತಮ್ಮಲ್ಲಿರುವ ಹೆಚ್ಚುವರಿ ಮೇವನ್ನು ಖರೀದಿಸಲು ಇಲಾಖೆಯಿಂದ ಕ್ರಮವಹಿಸಲಾಗುವುದು.
ಜಾನುವಾರುಗಳಿಗೆ ಮೇವಿನ ಪೂರೈಕೆಯಲ್ಲಿ ಕೊರತೆಯನ್ನು ನೀಗಿಸಲು ಮೇವಿನ ಬೀಜದ ಕಿರುಪೊಟ್ಟಣವನ್ನು ಉಚಿತವಾಗಿ ಜಿಲ್ಲೆಯಾದ್ಯಂತ ವಿತರಿಸಲಾಗುತ್ತಿದ್ದು, ನೀರಾವರಿ ಸೌಲಭ್ಯ ಹೊಂದಿರುವ ರೈತರು ಮೇವನ್ನು ಬೆಳೆದು ಸಂರಕ್ಷಿಸಿಕೊಳ್ಳಲು ಹಾಗೂ ಜಿಲ್ಲೆಯಲ್ಲಿನ ರೈತರು ತಮ್ಮ ಜಾನುವಾರುಗಳನ್ನು ಸಂರಕ್ಷಿಸಲು ಉತ್ತೇಜಿಸಲಾಗಿದೆ. ತೀವ್ರ ಬರದ ಕೊರತೆಯು ಉಂಟಾದಲ್ಲಿ ಸರ್ಕಾರ ನೀಡುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.