ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉದ್ಯಮಿ ಜಿ.ಸಿ.ಕಿರಣ್ ಒಂದು ಲಕ್ಷ ರೂ. ದೇಣಿಗೆ

ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉದ್ಯಮಿ ಜಿ.ಸಿ.ಕಿರಣ್ ಅವರು ತಮ್ಮ ತಂದೆ ದಿ.ಜಿ.ಎಸ್. ಚಂದ್ರಶೇಖರಯ್ಯ ಅವರ ಸ್ಮರಣಾರ್ಥ ಗೋಣಿ ಭೈರವೇಶ್ವರ ಸ್ಮಾರಕ ದತ್ತಿ ಪ್ರಶಸ್ತಿ ನೀಡಲು 1 ಲಕ್ಷ ರೂ. ದೇಣಿಗೆಯ ಚೆಕ್ ಅನ್ನು ವಿತರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಅವರಿಗೆ ಚೆಕ್ ನೀಡಿ ಮಾತನಾಡಿದ ಅವರು, ಪತ್ರಿಕಾ ರಂಗ ಸಮಾಜದ ಕಣ್ಣುಗಳಿದ್ದಂತೆ. ಇಲ್ಲಿನ ಆಗು ಹೋಗುಗಳನ್ನು ತಿಳಿಸುತ್ತ ಎಲ್ಲಾ ರಂಗಗಳ ಲೋಪ ಎತ್ತಿ ಹಿಡಿಯುವಲ್ಲಿ ಶ್ರಮಿಸಿ, ದುಡಿಯುವ ಪತ್ರಕರ್ತರ ಸೇವೆ ಅಮೂಲ್ಯವಾದುದು ಎಂದರು.

ಜಿಲ್ಲಾದ್ಯಂತ ವೃತ್ತಿನಿರತ ಪತ್ರಕರ್ತರಾಗಿ ಸಲ್ಲಿಸಿರುವ ಸೇವೆ ಗುರುತಿಸಿ ಅವರನ್ನು ಗೌರವಿಸಲು ನನ್ನ ತಂದೆ ಹೆಸರಿನಲ್ಲಿ ತಮ್ಮ ಸಂಘದಲ್ಲಿ 1 ಲಕ್ಷ ಠೇವಣಿ ಇಡುತ್ತಿದ್ದೇನೆ. ಅದರಲ್ಲಿ ಬರುವ ವಾರ್ಷಿಕ ಬಡ್ಡಿ ಹಣದಲ್ಲಿ ಹಿರಿಯ ಪತ್ರಕರ್ತರೊಬ್ಬರಿಗೆ 5 ಸಾವಿರ ರೂ.ನಗದು, ದಿ.ಜಿ.ಎಸ್. ಚಂದ್ರಶೇಖರಯ್ಯ ಸ್ಮರಣಾರ್ಥ ಗೋಣಿ ಭೈರವೇಶ್ವರ ಸ್ಮಾರಕ ದತ್ತಿ ಪ್ರಶಸ್ತಿ ಫಲಕ, ಫಲ, ಪುಷ್ಪಗಳನ್ನು ನೀಡಿ ಗೌರವಿಸಬೇಕೆಂದು ಹೇಳಿದರು.
1984-85ನೇ ಸಾಲಿನಲ್ಲಿ ನಡೆದ ಗಂಗಾರಾಂ ಕಟ್ಟಡ ಕುಸಿದಾಗ ಪತ್ರಕರ್ತರು ವಹಿಸಿದ ಕಾಳಜಿ ಮತ್ತು ಶ್ರಮವನ್ನು ನಾನು ಗಮನಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಮುನ್ನುಗ್ಗಿ ಕೆಲಸ ಮಾಡಿದ್ದಾರೆ. ಸಮಾಜದ ಹಿತಕ್ಕಾಗಿ ದುಡಿಯುವ ಪತ್ರಕರ್ತರಿಗೆ ಹೆಚ್ಚಿನ ನೆರವು ದೊರಕಬೇಕಿದೆ ಎಂದರು.

ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮತನಾಡಿ, ಸಮಾಜ ಸೇವೆ ಜಿ.ಸಿ. ಕಿರಣ್ ಅವರು ತಮ್ಮ ತಂದೆ ದಿ. ಜಿ.ಎಸ್. ಚಂದ್ರಶೇಖರಯ್ಯ ಅವರ ಸ್ಮರಣಾರ್ಥ 1 ಲಕ್ಷ ರೂ. ದತ್ತಿ ನೀಡಿ, ಪತ್ರಕರ್ತರ ಸೇವೆಯನ್ನು ಗುರುತಿಸಿ ಪ್ರೋತ್ಸಾಹ ಕೆಲಸ ಮಾಡಿದ್ದಾರೆ. ಹಾಗೆಯೇ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸ್ಥಾಪಿಸಿರುವ ಕ್ಷೇಮಾಭಿವೃಧ್ದಿ ನಿಧಿ 25 ಸಾವಿರ ರೂ. ದೇಣಿಗೆ ನೀಡಿ, ಇತರರಿಗೆ ಮಾದರಿಯಾಗಿದೆ ಎಂದು ಪ್ರಶಂಸಿದರು.

ಇದೇ ವೇಳೆಯಲ್ಲಿ ಕಿರಣ್ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 25 ಸಾವಿರ ರೂ. ಚೆಕ್ ವಿತರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಎಂ.ಈ. ಮಂಜುನಾಥ್, ಗೂಳೀಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಪ್ರಸಾದ್‍ಲಕ್ಕೂರು, ಖಜಾಂಚಿ ರೇಣುಕೇಶ್, ಪತ್ರಕರ್ತರಾದ ಎಸ್.ಎಂ. ನಂದೀಶ್, ಬನಶಂಕರ ಆರಾಧ್ಯ, ಕೋಟಂಬಳ್ಳಿ ಗುರುಸ್ವಾಮಿ, ಎನ್. ನಾಗೇಂದ್ರಸ್ವಾಮಿ, ಸಿದ್ದಲಿಂಗಸ್ವಾಮಿ, ಗಂಗಾಧರ್, ಸವಿತಾ ಜಯಂತ್, ಮಹೇಂದ್ರ, ರಾಜೇಂದ್ರ, ಬಿಳಿಗಿರಿ ಶ್ರೀನಿವಾಸ್, ರಂಗೂಪುರಶಿವಕುಮಾರ್, ಎನ್. ರವಿಚಂದ್ರ, ಪೈರೋಜ್ ಖಾನ್ ಇತರರು ಇದ್ದರು.

Leave a Reply

Your email address will not be published. Required fields are marked *