ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆ : ಮೇಲಾಜಿಪುರ ನವೀನ್ ಪ್ರಥಮ ಸ್ಥಾನ

ಚಾಮರಾಜನಗರ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಮೇಲಾಜಿಪುರ ನವೀನ್ ೧೩.೨೦೦ ಕೆಜಿ ಕರೆದು ಪ್ರಥಮ ಸ್ಥಾನ ಪಡೆದುಕೊಂಡರು.

ಕಾಗಲವಾಡಿ ಮುರುಗೇಶ್ ೮.೩೦೦ ಕೆಜಿ ಹಾಲು ಕರೆದು ದ್ವೀತಿಯ ಪಡೆದುಕೊಂಡರೆ , ಮೂಡ್ಲುಪುರ ಬಸವಣ್ಣ ೭.೮೫೦ ಕೆಜಿ ಹಾಲು ಕರೆದು ತೃತೀಯ ಸ್ಥಾನವನ್ನು ಪಡೆದುಕೊಂಡರು. ಇನ್ನಳಿದು ೯ ರಾಸುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನವಾಗಿ ಹಾಲಿನ ಪೌಡರ್, ಪಶು ಆಹಾರ ಹಾಗು ಪ್ರಮಾಣ ಪತ್ರವನ್ನು ಪಡೆದುಕೊಂಡರು.

ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಚಾಲನೆ : ಇದಕ್ಕು ಮುನ್ನಾ ಹಸು ಕರೆಯುವ ಸ್ಪರ್ಧೆಗೆ ಹಸುಗಳಿಗೆ ಬಾಳೆ ಹಣ್ಣು ತಿನ್ನಿಸುವ ಹಾಲು ಕರೆಯುವ ಮೂಲಕ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹೈನುಗಾರಿಕೆ ಪ್ರಧಾನ ಕಸುಬಾಗಿದ್ದು, ಹೈನುಗಾರಿಕೆಯಿಂದ ರೈತರು ಅಭಿವೃದ್ದಿಯತ್ತ ಸಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದಲ್ಲಿ ರೈತರು ಉತ್ಸಾಹದಿಂದ ಭಾಗವಹಿಸಬೇಕೆಂಬ ಉದ್ದೇಶದಿಂದಾಗಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಹಾಲು ಕರೆಯುವ ಸ್ಪರ್ಧೇಯನ್ನು ಪಶು ಪಾಲನೆ ಇಲಾಖೆಯ ಮುಲಕ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ೧೨ ಮಂದಿ ರೈತರು ತಮ್ಮ ಹಸುಗಳೊಂದಿಗೆ ಭಾಗವಹಿಸಿರುವುದು ಹೆಮ್ಮೆ ತಂದಿದೆ ಎಂದರು.

ರೈತರು ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ರಾಸುಗಳ ಗುಣಮಟ್ಟದ ಮತ್ತು ಪ್ರತಿಭೆಯನ್ನು ಸಾಧಿಸಿದ್ದಾರೆ. ಇದು ನಿರಂತರವಾಗಿಲಿ. ಇನ್ನು ಹೆಚ್ಚಿನ ರೀತಿಯಲ್ಲಿ ರೈತರು ಮುಂದಿನ ವರ್ಷದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಹನುಮೇಗೌಡ, ಸಹಾಯ ನಿರ್ದೇಶಕ ಡಾ. ಶಿವಣ್ಣ, ಜಿಲ್ಲೆಯ ಎಲ್ಲಾ ತಾಲುಕು ಪಶು ವೈದ್ಯಾಧಿಕಾರಿಗಳು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *