ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ : ಹೆಸರು ನೋಂದಾಯಿಸಲು ಅವಕಾಶ

ಚಾಮರಾಜನಗರ: ಅರ್ಹತಾ ದಿನಾಂಕ 01.11.2023 ಕ್ಕೆ ನಿಗದಿಪಡಿಸಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ದಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಭಾರತ ಚುನಾವಣಾ ಆಯೋಗವು ದಿನಾಂಕ: 09.08.2023 ರ ಪತ್ರದನ್ವಯ ಕರ್ನಾಟಕ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ದಪಡಿಸಲಾಗುತ್ತಿರುವುದರಿಂದ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ-19 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆಂದು ನಿರ್ದೇಶನ ನೀಡಿದೆ.
ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲು ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ. ಅರ್ಜಿ ನಮೂನೆ – 19 ರಲ್ಲಿ ಅರ್ಜಿಯನ್ನು ಸ್ವೀಕರಿಸಲು ನವೆಂಬರ್ 6 ಕೊನೆಯ ದಿನವಾಗಿದೆ. ಕರಡು ಮತದಾರರ ಪಟ್ಟಿಯನ್ನು ನವೆಂಬರ್ 23ರಂದು ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್ 23 ರಿಂದ ಡಿಸೆಂಬರ್ 9ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30ರಂದು ಪ್ರಕಟಿಸಲಾಗುತ್ತದೆ.
ಕರ್ನಾಟಕ ದಕ್ಷಿಣ ಶಿಕ್ಷಕರ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.
ಭಾರತದ ಪ್ರಜೆಯಾಗಿರುವ ಮತ್ತು ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಮತ್ತು 1ನೇ ನವೆಂಬರ್ 2023ಕ್ಕೆ ಮೊದಲು ಆರು ವರ್ಷದ ಅವಧಿಯಲ್ಲಿ ಕನಿಷ್ಟ ಒಟ್ಟು 3 ವರ್ಷಗಳಷ್ಟು ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ಧಿಷ್ಟಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಭೋಧನಾ ವೃತ್ತಿಯಲ್ಲಿ ನಿರತನಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ.
ಯಾವುದೇ ವ್ಯಕ್ತಿಯು ನಮೂನೆ-19 ರಲ್ಲಿ ಅರ್ಜಿಯನ್ನು ಸಲ್ಲಿಸಿ, ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೋಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣಪತ್ರವನ್ನು ಲಗತ್ತಿಸಿ ಸಲ್ಲಿಸಬೇಕು. (ಪ್ರಮಾಣಪತ್ರದ ಮಾದರಿ ಮತ್ತು ನಮೂನೆ-19 ಅನ್ನು ಪಡೆಯಬಹುದಾಗಿದೆ.)
ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿಯು ಭೋಧನಾ ವೃತ್ತಿಯಲ್ಲಿ ನಿರತನಾಗಿರದಿದ್ದಲ್ಲಿ, ಪ್ರಮಾಣ ಪತ್ರವನ್ನು ಅಂತಹ ವ್ಯಕ್ತಿಯು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿಸಿರಬೇಕು.
ಖುದ್ದಾಗಿ ಅಥವಾ ಅಂಚೆಯ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲಾ ಅರ್ಜಿಗಳನ್ನು ಒಟ್ಟಾರೆಯಾಗಿ ಕಳುಹಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ-19 ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ, ಮೂಲ ಪ್ರಮಾಣ ಪತ್ರಗಳನ್ನು ಒದಗಿಸಬೇಕು.
ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ಅವನು ತಿಳಿದಿರುವ ಅಥವಾ ನಂಬುವಂತಹ ಅಥವಾ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಪ್ರಜಾಪ್ರಾತಿನಿಧ್ಯ ಅಧಿನಿಯಮ 1950 ರ 31ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುವುದು.
ಭಾರತ ಚುನಾವಣಾ ಆಯೋಗವು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಭಾಗದ ಚಾಮರಾಜನಗರ, ಮೈಸೂರು, ಮಂಡ್ಯ, ಮತ್ತು ಹಾಸನ ಜಿಲ್ಲಾಧಿಕಾರಿಗಳನ್ನು, ಮೈಸೂರು ಮಹಾನಗರಪಾಲಿಕೆಯ ಆಯುಕ್ತರು, ಮೈಸೂರು ವಿಭಾಗದ ಆಯಾ ಉಪ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಉಪ ವಿಭಾಗಾಧಿಕಾರಿಗಳು, ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಿದೆ.
ನಮೂನೆ-19 ರಲ್ಲಿನ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿ / ನಿಯೋಜಿತ ಅಧಿಕಾರಿಗಳವರ ಕಚೇರಿಯಿಂದ ಪಡೆಯಬಹುದು. ಕೈಬರಹ, ಬೆರಳಚ್ಚು ಮಾಡಿದ ಅಥವಾ ಖಾಸಗಿಯಾಗಿ ಮುದ್ರಿಸಿದ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದು. ನಮೂನೆ-19 ರ ಅರ್ಜಿಗಳನ್ನು ಬಲ್ಕ್ (ಒಟ್ಟಿಗೆ) ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *