ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ : ಜಿಲ್ಲೆಯಲ್ಲಿ 2084 ಮತದಾರರು

ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 2084 ಮತದಾರರು ಪಟ್ಟಿಯಲ್ಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವಿಷಯ ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ 1812 ಮತದಾರರಿದ್ದು, ಕರಡು ಮತದಾರರ ಪಟ್ಟಿಯ ನಂತರ 302 ಅರ್ಜಿಗಳನ್ನು ಇತ್ಯರ್ಥಗೊಳಿಸಿದ್ದು, 281 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 9 ಅರ್ಜಿಗಳು ತಿರಸ್ಕøತಗೊಂಡಿವೆ. ಅಂತಿಮ ಮತದಾರರ ಪಟ್ಟಿಯಲ್ಲಿ 2084 ಮತದಾರರಿದ್ದಾರೆ. ಮತದಾರರ ಪಟ್ಟಿಯನ್ನು ಆಯಾ ತಾಲೂಕು ಕಚೇರಿಗಳಲ್ಲಿ ಪ್ರಕಟಿಸಲಾಗಿದೆ ಎಂದರು.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಶೇ. 100ರಷ್ಟು ದೋಷರಹಿತ ಹಾಗೂ ಪಾರದರ್ಶಕವಾಗಿ ತಯಾರಿಸಲಾಗಿದ್ದು, ದಿನಾಂಕ: 23-11-2023ರಿಂದ 09-12-2023ರವರೆಗೆ ಸ್ವೀಕರಿಸಲಾಗಿರುವ ಹಕ್ಕು ಹಾಗೂ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಿ ಅಂತಿಮ ಮತದಾರರ ಪಟ್ಟಿ ತಯಾರಿಸಿ ಪ್ರಕಟಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.

ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು 2023ರ ನವೆಂಬರ್ 23 ರಿಂದ ಡಿಸೆಂಬರ್ 09ರವರೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ 57, ಚಾಮರಾಜನಗರ 106, ಯಳಂದೂರು 37, ಕೊಳ್ಳೇಗಾಲ 72 ಹಾಗೂ ಹನೂರು ತಾಲೂಕಿನ 30 ಅರ್ಜಿಗಳು ಸೇರಿದಂತೆ ಒಟ್ಟು 302 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 281 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 19 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಉಳಿದ 2 ಅರ್ಜಿಗಳನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲಾಗಿದೆ ಎಂದರು.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳು ಒಳಪಡಲಿದ್ದು, ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ 2023ರ ಡಿಸೆಂಬರ್ ಅಂತ್ಯಕ್ಕೆ ಅಂತಿಮ ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ 379, ಚಾಮರಾಜನಗರ 575, ಯಳಂದೂರು 191, ಕೊಳ್ಳೇಗಾಲ 702 ಹಾಗೂ ಹನೂರು ತಾಲೂಕಿನಲ್ಲಿ 237 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2084 ಮತದಾರರಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಯ ವೆಬ್‍ಸೈಟ್ http://chamrajnagar.nic.in/en/election ನಲ್ಲಿ ವಿತ್‍ಔಟ್ ಇಮೇಜಸ್ ಪ್ರತಿಯನ್ನು ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಚಿಕ್ಕಮಹದೇವು, ಎಸ್. ಬಾಲಸುಬ್ರಮಣ್ಯ, ಎನ್. ನಾಗಯ್ಯ, ಎಸ್. ಮಹೇಶ್‍ಗೌಡ, ಬ.ಮ. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಿರಸ್ತೇದಾರ್ ಬಸವರಾಜು, ತಾಲೂಕು ಕಚೇರಿ ಚುನಾವಣಾ ಶಿರಸ್ತೇದಾರ್ ಪ್ರಕಾಶ್, ಇತರರು ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *