ಚಾಮರಾಜನಗರ: ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಾರ್ವಜನಿಕ ಶೌಚಾಲಯ, ಸ್ನಾನ ಗೃಹ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದರು.
ನಗರದಲ್ಲಿ ಅಂದಾಜು 31 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ ವ್ಯವಸ್ಥೆಗಳನ್ನು ಒಳಗೊಂಡ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈ ಸಂಬಂಧ ಸೂಕ್ತ ಸ್ಥಳವನ್ನು ಜಿಲ್ಲಾಧಿಕಾರಿಯವರು ಪರಿಶೀಲಿಸಿದರು.
ನಗರದ ಪೇಟೆ ಪ್ರೈಮರಿ ಶಾಲೆ ಬಳಿ, ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ, ಲಾರಿ ನಿಲ್ದಾಣದ ಬಳಿ ಭೇಟಿ ನೀಡಿ ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲಿಸಿದರು.
ಇದೇ ವೇಳೆ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಮೂಲ ಸೌಕರ್ಯವನ್ನು ವೀಕ್ಷಿಸಿದರು. ಶೌಚಾಲಯ ನಿರ್ವಹಣೆ, ಸ್ವಚ್ಚತೆ ಬಗ್ಗೆ ಪರಿಶೀಲನೆ ಮಾಡಿದರು. ಕುಡಿಯುವ ನೀರು ಇತರೆ ಸೌಲಭ್ಯಗಳನ್ನು ಪರಿಶೀಲಿಸಿದರು. ಪ್ರಯಾಣಿಕರೊಂದಿಗೆ ಮಾತನಾಡಿ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿದೆಯೇ, ಇನ್ನೂ ಯಾವ ಸೌಕರ್ಯಗಳು ಬೇಕಿದೆ ಎಂಬ ಬಗ್ಗೆ ಪ್ರಶ್ನಿಸಿದರು.
ಬಸ್ ನಿಲ್ದಾಣದಲ್ಲಿನ ಮಹಿಳಾ ಪ್ರಯಾಣಿಕರ ವಿಶ್ರಾಂತಿ ನಿರೀಕ್ಷಣಾ ಕೊಠಡಿಗೆ ಭೇಟಿ ನೀಡಿ ಅಲ್ಲಿಯೂ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ಮಹಿಳಾ ಪ್ರಯಾಣಿಕರು, ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಸೌಲಭ್ಯಗಳ ಕುರಿತು ವಿವರ ಪಡೆದರು.
ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಪ್ರಯಾಣಿಕರು, ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
ನಗರಸಭೆ ಆಯುಕ್ತರಾದ ಎಸ್.ವಿ. ರಾಮದಾಸ್, ಆರೋಗ್ಯ ನಿರೀಕ್ಷಕರಾದ ಮಂಜು, ಇತರೆ ಅಧಿಕಾರಿಗಳು ಇದ್ದರು.