ಚಾಮರಾಜನಗರ:ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ನಗರದಲ್ಲಿಂದು ನಡೆದ ದಸರಾ ಮರೆಣಿಗೆಯಲ್ಲಿ ಜಿಲ್ಲೆಯ ವಿವಿಧ ಸಾಂಸ್ಕøತಿಕ ಕಲಾತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು (ಟ್ಯಾಬ್ಲೋ) ಜನರ ಕಣ್ಮನ ಸೆಳೆದವು.

ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿಂದು ಆಯೋಜಿಸಲಾಗಿದ್ದ ದಸರಾ ಮೆರವಣಿಗೆಗೆಯಲ್ಲಿ ವಿವಿಧ ಕಲಾ ಪ್ರಕಾರಗಳಾದ ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ, ಕಂಸಾಳೆ ನೃತ್ಯ, ನಾದಸ್ವರ, ನಂದಿಕಂಬ, ಬ್ಯಾಂಡೆಸೆಟ್ ವಾದನ, ಕೀಲು ಕುದುರೆ, ಗಾರುಡಿಗ ಗೊಂಬೆ, ಮಾರಮ್ಮನ ಕುಣಿತ, ಸುಗ್ಗಿ ಕುಣಿತ, ತಮಟೆ ವಾದನ ದೊಣ್ಣೆ ವರಸೆ, ಹುಲಿ ವೇಷóಧಾರಿಗಳು ಸೇರಿದಂತೆ ವಿವಿಧ ಸಾಂಸ್ಕøತಿಕ ಕಲಾತಂಡಗಳು ದಸರಾ ಮರೆವಣಿಗೆಗೆ ಮೆರುಗನ್ನು ತಂದವು.
ಅರಣ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಮ್ಮಾರರ ಅಭಿವೃದ್ದಿ ಸಂಘದ ಆಕರ್ಷಕ ಸ್ತಬ್ಧಚಿತ್ರ (ಟ್ಯಾಬ್ಲೋ)ಗಳು ಪಾಲ್ಗೊಂಡು ದಸರಾ ಮಹೋತ್ಸವದ ಮೆರವಣಿಗೆ ಕಳೆಯನ್ನು ಇಮ್ಮಡಿಗೊಳಿಸಿದ್ದು ವಿಶೇಷವಾಗಿತ್ತು.

ದಸರಾ ಮೆರವಣಿಗೆಯ ಕೇಂದ್ರ ಬಿಂದುವಾಗಿದ್ದ ಬೆಳ್ಳಿರಥಧಲ್ಲಿ ಅಳವಡಿಸಲಾಗಿದ್ದ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಮರಿತಿಬ್ಬೇಗೌಡ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು.
ಬಳಿಕ ಸಚಿವರು ಶಾಸಕರು, ಗಣ್ಯರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ತದನಂತರ ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ದಸರಾ ಅಂಗವಾಗಿ ಮಹಿಳಾ ಸಂಘಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು.
ಸಚಿವರು ಹಾಗೂ ಶಾಸಕರು ಪ್ರತಿ ಮಳಿಗೆಗೂ ಭೇಟಿ ನೀಡಿ ಮಾಹಿತಿ ಪಡೆದರು. ಅಲ್ಲದೆ ಮಹಿಳೆಯರು ತಯಾರಿಸಿದ ಉತ್ನ್ನಗಳನ್ನು ಖರೀದಿಸಿ ಉತ್ತೇಜನ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಇತರರು ಈ ಸಂದರ್ಭದಲ್ಲಿ ಇದ್ದರು.