ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಪೈಪ್‍ಲೈನ್ ಕಾಮಗಾರಿ, ತೆರಿಗೆ ವಸೂಲಾತಿ, ಆಸ್ತಿ ತೆರಿಗೆ ಸಂಗ್ರಹ, ಸಮುದಾಯ ಶೌಚಾಲಯಗಳ ನಿರ್ವಹಣೆ, ಕಸಸಂಗ್ರಹ ಹಾಗೂ ವಿಲೇವಾರಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ನಗರಸಭಾ ಆಡಳಿತಾಧಿಕಾರಿಯೂ ಆಗಿರುವ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನಗರಸಭಾ ಕಚೇರಿ ಸಭಾಂಗಣದಲ್ಲಿಂದು ನಡೆದ ಚಾಮರಾಜನಗರ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ ಮನೆ ತೆರಿಗೆ, ಅಂಗಡಿ, ಮಳಿಗೆಗಳ ಬಾಡಿಗೆ ಸೇರಿದಂತೆ ಇತರೆ ಕರವಸೂಲಿಗಳನ್ನು ನಿಗದಿತ ಅವಧಿಯಲ್ಲಿ ಮಾಡಬೇಕು. ಹಾಗೆಯೇ ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಜನರ ಜೀವನಮಟ್ಟ ಸುಧಾರಣೆಗೆ ಕ್ರಮ ವಹಿಸುವುದು ನಗರಸಭೆಯ ಜವಾಬ್ದಾರಿಯಾಗಿದೆ. ಚಾಮರಾಜನಗರ ನಗರಸಭೆ ಸ್ವಚ್ಚತೆಗೆ ಹೆಸರುವಾಸಿಯಾಗಬೇಕು. ನಗರಸಭೆಯ ಬಗ್ಗೆ ಜನರಲ್ಲಿ ಸಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುವುದು ನಗರ, ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ತಪ್ಪಿದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರ ಸ್ವಚ್ಚತೆಗಾಗಿ ಪ್ರತಿಯೊಂದು ವಾರ್ಡುಗಳ ಕಸ ಸಂಗ್ರಹಣೆ ಮಾಡಬೇಕು. ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಅಪೂರ್ಣವಾಗಿರುವ ಒಳಚರಂಡಿ ಕಾಮಗಾರಿಗಳಿಗೆ ಪ್ರಥಮಾದ್ಯತೆ ನೀಡಿ ಪೂರ್ಣಗೊಳಿಸಬೇಕು. ಇದಕ್ಕಾಗಿ ವಿವಿಧ ಯೋಜನೆಗಳಡಿ ಅನುದಾನ ಬಿಡುಗಡೆಯಾಗಿದೆ. ಕೆಲಸ ಮಾತ್ರ ವಿಳಂಬವಾಗುತ್ತಿದೆ. ಇದನ್ನು ಸಹಿಸಲಾಗುವುದಿಲ್ಲ. ನೀರಿನ ತೆರಿಗೆ, ವಾಣಿಜ್ಯ ತೆರಿಗೆ ಇನ್ನಿತರೆ ತೆರಿಗೆ ಸಂಗ್ರಹಿಸಿ ಸಂಪನ್ಮೂಲ ಕ್ರೋಢಿಕರಣ ಮಾಡಬೇಕು. ತೆರಿಗೆ ಸಂಗ್ರಹ ಕಾರ್ಯದಲ್ಲಿ ಹಾಗೂ ದಂಡ ವಿಧಿಸುವಲ್ಲಿ ಅಧಿಕಾರಿಗಳು ಯಾರೊಂದಿಗೂ ರಾಜೀಯಾಗಬಾರದು ಎಂದು ಅಧಿಕಾರಿಗಳಿಗೆ ಕಟ್ಟಿನಿಟ್ಟಿನ ನಿರ್ದೇಶನ ನೀಡಿದರು.

ನಗರಸಭೆಯ ಹಲವು ವಾರ್ಡ್‍ಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ನ ಈ ಬಾರಿ ಬರಗಾಲ ಎದುರಾಗಿದ್ದು, ಯಾವುದೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಈ ಬಗ್ಗೆ ಕುಡಿಯುವ ನೀರಿನ ಸಮಗ್ರ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬೋರ್‍ವೆಲ್ ಕೆಟ್ಟಿದ್ದರೆ ಶೀಘ್ರವಾಗಿ ದುರಸ್ಥಿಪಡಿಸಬೇಕು. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಮನಗಂಡು ಕಾರ್ಯನಿರ್ವಹಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾಯವರು ತಿಳಿಸಿದರು.

ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ ಹಾವಳಿ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಫ್ಲೆಕ್ಸ್‍ಗಳನ್ನು ನಿಷೇಧಿಸಲಾಗಿದ್ದು, ಬಟ್ಟೆಯಿಂದ ತಯಾರಿಸಿದ ಬ್ಯಾನರ್ ಬಳಸಲು ಅನುಮತಿ ನೀಡಬೇಕು. ಫ್ಲೆಕ್ಸ್‍ಗಳ ಅಳವಡಿಕೆಗೆ ಶುಲ್ಕ ನಿಗದಿಪಡಿಸಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಬೇಕು. ಜನರ ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ನಗರದ ಜೋಡಿರಸ್ತೆಯಲ್ಲಿ ರಸ್ತೆಯ ಮದ್ಯಭಾಗದಲ್ಲಿ ಫ್ಲೆಕ್ಸ್‍ಗಳ ಅಳವಡಿಕೆ ನಿರ್ಬಂಧಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ನಿಯಂತ್ರಿಸಬೇಕಾಗಿದೆ ಎಂದರು.

ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಅಗತ್ಯ ಸೇವಾ ಸೌಲಭ್ಯ ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಬೇಕು. ವಿಳಂಬವಿಲ್ಲದೆ ಕಾಲಕಾಲಕ್ಕೆ ವೇತನ ಪಾವತಿಸಬೇಕು. ಪೌರಕಾರ್ಮಿಕರಿಂದ ಯಾವುದೇ ದೂರುಗಳು ಬಾರದಂತೆ ಕ್ರಮ ವಹಿಸಬೇಕು. ನಗರಸಭೆಯಲ್ಲಿ ಅಧಿಕಾರಿ, ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರು ನಿಗದಿತ ಅವಧಿಯಲ್ಲಿ ಕಚೇರಿ ಹಾಜರಾಗಬೇಕು. ಇದಕ್ಕಾಗಿ ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಅಧಿಕಾರಿಗಳು ಸೂಚನೆ ನೀಡಿದರು.

ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿಯನ್ನು ವ್ಯಾಪಾರ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಪರಿಶೀಲಿಸಿ ಒಂದು ತಿಂಗಳೊಳಗೆ ಪರವಾನಗಿ ನೀಡಬೇಕು. ಬಾಕಿ ಇರುವ ಪ್ರತಿಯೊಂದು ಅಂಗಡಿ, ವ್ಯಾಪಾರ ಮಳಿಗೆಗಳಿಂದ ಕರ ವಸೂಲು ಪ್ರಕ್ರಿಯೆಯನ್ನು ಮೂಂದಿನ ಮೂರು ತಿಂಗಳೊಳಗೆ ಮುಗಿಸಬೇಕು. ಹಾಪ್‍ಕಾಮ್ಸ್ ಹಾಗೂ ನಂದಿನಿ ಪಾರ್ಲರ್‍ಗಳಿಂದಲೂ ಬಾಡಿಗೆ ಸಂಗ್ರಹಿಸಬೇಕು. ಆಯಾ ವಾರ್ಡ್‍ಗಳಲ್ಲಿ ಖಾತಾ ಆಂದೋಲನಗಳನ್ನು ಏರ್ಪಡಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಪೂರ್ವಸಿದ್ದತಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಕುಡಿಯುವ ನೀರು, ನಿವೇಶನಗಳಿಗೆ ಹಕ್ಕುಪತ್ರ ವಿತರಣೆ, ರಸ್ತೆ ಅಗಲೀಕರಣ,ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕ ವಿದ್ಯುತ್ ಕಂಬಗಳ ತೆರವು, ಪೈಪ್‍ಲೈನ್ ಕಾಮಗಾರಿ, ಬೀದಿದೀಪ ಅಳವಡಿಕೆ,ಉದ್ಯಾನವನ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಬೀದಿ ನಾಯಿಗಳ ಹಾವಳಿ ಸೇರಿದಂತೆ ಹತ್ತು, ಹಲವು ಸಮಸ್ಯೆಗಳು ಸಾಮಾನ್ಯ ಸಭೆಯಲ್ಲಿ ವಿಸ್ತøತವಾಗಿ ಚರ್ಚೆಯಾದವು. ನಗರಸಭಾ ಸದಸ್ಯರು ತಮ್ಮ ವ್ಯಾಪ್ತಿಯ ಕುಂದುಕೊರತೆಗಳನ್ನು ಸಭೆಯಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ನಗರಸಭೆಯ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ನಗರಸಭಾ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *