ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ 2 ಬಡಾವಣೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ನಾಗವಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈಗಾಗಲೇ ಪ್ರತಿಯೊಂದು ರಸ್ತೆಗಳಿಗೂ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡಲಾಗಿದ್ದು, ಈಗ ಪರಿಶಿಷ್ಟ ಜಾತಿಯ ಎರಡೂ ಬಡಾವಣೆಗಳಿಗೆ ಎಸ್‍ಇಪಿ ಯೋಜನೆ ಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮದಲ್ಲಿ ಎಲ್ಲಾ ವರ್ಗದ ಜನರಿಗೂ ಸಮುದಾಯ ಭವನ, ಗಂಗಾಕಲ್ಯಾಣ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲೂ ಕೂಡಾ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಿಸಿ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾ ಧ್ಯಕ್ಷ ಅಸ್ಗರ್ ಪಾಷಾ, ಸದಸ್ಯರಾದ ಸರೋಜಮ್ಮ, ಪುಟ್ಟನಂಜಮ್ಮ, ಸುಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಚಿಕ್ಕಮಹದೇವು, ನಾಗವಳ್ಳಿ ನಾಗಯ್ಯ, ಕೆಆರ್‍ಡಿಎಲ್ ಇಂಜಿನಿಯರ್ ಮಧು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.