ಪ್ರಜಾಪ್ರಭುತ್ವ, ಸಾಮರಸ್ಯ ಬಲಗೊಳ್ಳಲು ಸಂಪನ್ಮೂಲ ಸಮಾನ ಹಂಚಿಕೆಯಾಗಬೇಕು : ಆರ್.ರಾಜು

ಸಂತೇಮರಹಳ್ಳಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜದಲ್ಲಿ ಯುವಕರ ಪಾತ್ರ ಕುರಿತ ಚಿಂತನ ಸಭೆ

ಚಾಮರಾಜನಗರ: ದೇಶದಲ್ಲಿರುವ ಸಂಪನ್ಮೂಲ ಸಮಾನಾಂತರವಾಗಿ ಹಂಚಿಕೆಯಾದ ಆದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ರಾಜು ಹೇಳಿದರು.

ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸರ್ವೋದಯ ಸಾಮರಸ್ಯ ವೇದಿಕೆ ವತಿಯಿಂದ ನಡೆದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜದಲ್ಲಿ ಯುವಕರ ಪಾತ್ರ ಕುರಿತ ಚಿಂತನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಮಹಾನ್ ನಾಯಕರು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ತಮ್ಮ ಪ್ರಾಣವನ್ನೇ ಪಣಕಿಟ್ಟು ಹೋರಾಟ ಮಾಡಿ, ಬ್ರಿಟಿಷರ ಬಳಿ ಇದ್ದ ಅಧಿಕಾರವನ್ನು ಪಡೆದುಕೊಂಡರು. ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಅಭಿವೃದ್ದಿ ಪರವಾದ ಎಲ್ಲಾ ವರ್ಗದವರು ಒಪ್ಪುವಂತಹ ಸಂವಿಧಾನವನ್ನು ಸಮರ್ಪಣೆ ಮಾಡಿದರು. ಇದರಲ್ಲಿ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಹಕ್ಕು ಹಾಗು ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ದೇಶದ ಎಲ್ಲರಿಗೂ ಒಂದೇ ಓಟಿನ ಮಹತ್ವನ್ನು ನೀಡಿದರು. ಇದರ ಪರಿಣಾಮ ನಾವೆಲ್ಲರು ಇಂದು ಸ್ವಾಭಿಮಾನದಿಂದ ಬದುಕುವಂತೆ ಹಾಕಿದೆ ಎಂದರು. ಇದೇ ಮಾದರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಟ್ಟಿಕೊಂಡು ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸಮಾನತೆ ಎಲ್ಲರ ಹಕ್ಕಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನ ಸಾಗಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ಮತದಾರರೇ ನಾಯಕರು. ಹೀಗಾಗಿ ಎರಡು ಮತ್ತು ಮೂರನೇ ದರ್ಜೆ ನಾಯಕರನ್ನು ಹುಟ್ಟು ಹಾಕಬೇಕು. ಒಳ್ಳೆಯ ನಾಯಕನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಬಗ್ಗೆ ನಂಬಿಕೆ ಮೂಡಿಸುವುದೇ ಸಾಮಾಜಿಕ ಸಾಮರಸ್ಯ ವೇದಿಕೆ ಉದ್ದೇಶ. ಬುದ್ದ, ಬಸವ ಅಂಬೇಡ್ಕರ್ ಸದಾ ಚಿರಸ್ಥಾಯಿಯಾಗಿರುತ್ತಾರೆ. ಮೊಘಲ್ ದೊರೆ ಆಡಳಿತ ಕಾಲದಲ್ಲಿ ಈ ಸಮಾಜದ ಪರ ಕಾಳಜಿ ಇರಲಿಲ್ಲ. ತದ ನಂತರ 250 ವರ್ಷಗಳ ಬ್ರಿಟಿಷರ ಆಡಳಿತ ನಡೆಸಿದರು ಯಾವುದೇ ಪ್ರಯೋಜನ ವಾಗಲಿಲ್ಲ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ಆಶಯ ಹಾಗೂ ಬಾಬಾ ಸಾಹೇಬಸ್ ಅಂಬೇಡ್ಕರ್ ಅವರ ಸಂವಿಧಾನ ಚಿಂತನೆಗಳು ಒಂದೇ ಆಗಿವೆ. ಅಂದು ಬಸವಣ್ಣ ಸಾರಿದ ಅಖಿತ ಸಂದೇಶ ಹಾಗು ವಚನ ಸಂಪುಟಗಳಲ್ಲು, 15ನೇ ಶತಮಾನತದಲ್ಲಿ ಬಂದ ಪುರಂದಾಸರು, ದಾಸರ ಕೀರ್ತನೆಗಳು ಸಹ ಸಂವಿಧಾನ ಆಶಯಕ್ಕೆ ತಕ್ಕಂತೆ ಇದೆ. ಹೀಗಾಗಿ ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ, ಭ್ರಾತೃತ್ವ ಅಡಕವಾಗಿದೆ ಎಂದರು.

ದೇಶದ ಜನಸಂಖ್ಯೆಯಲ್ಲಿ ಶೇಕಡ 40 ರಷ್ಟು ಮಂದಿ ಯುವಕರಿದ್ದಾರೆ. ಹೀಗಾಗಿ ದೇಶದ ಸಂಪನ್ಮೂಲಗಳ ಹಂಚಿಕೆಯಾದರೆ, ಮತ್ತು ದೇಶದಲ್ಲಿರುವ 60 ಕೋಟಿ ಯುವಕರನ್ನು ಬಳಕೆ ಮಾಡಿಕೊಂಡು ಅಭಿವೃದ್ದಿಯತ್ತ ಸಾಗಿದರೆ, ನಮ್ಮ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲಿದೆ ಎಂದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ ಮಾತನಾಡಿ, ಜಗಜ್ಯೋತಿ ಬಸವಣ್ಣ, ಅಂಬೇಡ್ಕರ್ ಮಹಿಳೆಯರ ಪರ ಮೊಟ್ಟಮೊದಲ ಪ್ರತಿಪಾದಕರು.ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ತುಂಬಾ ಸಮಸ್ಯೆ ಯಾಗುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕರೆದಿದ್ದರೂ. ಮಹಿಳೆಯ ಸ್ಥಿತಿ ಸುಧಾರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಛೇರ್ಮನ್ ದೇಮಹಳ್ಳಿ ಶಿವಮಲ್ಲಪ್ಪ, ಮುಖಂಡರಾದ ಜನ್ನೂರು ರೇವಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಪುಟ್ಟರಾಜೇಗೌಡ, ತಾ.ಪಂ. ಉಪಾಧ್ಯಕ್ಷ ರವೀಶ್, ನಗರಸಭಾ ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಬಾಗಳಿರೇವಣ್ಣ, ಬಸವನಪುರ ರಾಜಶೇಖರ್, ವಿ.ಶ್ರೀನಿವಾಸಪ್ರಸಾದ್, ಸಿ.ಎಂ.ಕೃಷ್ಣಮೂರ್ತಿ, ರಾಜು, ಬಸವರಾಜು, ಮಾಲಂಗಿ ಮೂರ್ತಿ, ತೊರಹಳ್ಳಿ ಕುಮಾರ್,ಕೋಳಿ ಬಸವರಾಜು ಮೊದಲಾಧವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *