ಕರ್ನಾಟಕ ಪ್ರೆಸ್ ಕ್ಲಬ್ ನ ಕೆ.ಆರ್.ನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸುಮಂಗಲಿ ಸೇವಾ ಟ್ರಸ್ಟ್ ಪ್ರತಿ ವರ್ಷವೂ ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಗುರುತಿಸಿ ನೀಡುತ್ತಾ ಬರುತ್ತಿರುವ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿಗೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಪತ್ರಕರ್ತರು, ಸಾಮಾಜಿಕ ಸೇವಾ ಕಾರ್ಯಕರ್ತರು ಹಾಗೂ ಸಂಘಟಕರಾದ ಕೆ.ಟಿ.ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ.
ಇವರು ಸಾಕ್ಷರತೆ, ವಿವಿಧ ಜನಜಾಗೃತಿ ಕಲಾ ಜಾಥ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಗಳು, ಯುವಜನ ಮೇಳಗಳು, ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಕಾನೂನು ಅರಿವು ಕಾರ್ಯಕ್ರಮ ಸೇರಿದಂತೆ ಹತ್ತಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದರ ಜೊತೆಗೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಕಳೆದ 15 ವರ್ಷಕ್ಕೂ ಹೆಚ್ಚಿನ ಕಾಲದಿಂದಲೂ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಇವರಿಗೆ ಜಿಲ್ಲಾ ಯುವ ಪ್ರಶಸ್ತಿ, ಡಾ.ಎಪಿಜೆ ಅಬ್ದುಲ್ ಕಲಾಂ ಸದ್ಭಾವನಾ ಪ್ರಶಸ್ತಿ, ಲೇಪಾಕ್ಷ ಶ್ರೀ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ, ಯುವ ಚೇತನ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಸಂಘಟನೆಗಳು ಇವರನ್ನು ಸನ್ಮಾನಿಸಿವೆ.
ಇವರಿಗೆ ನ.30ರಂದು ಮೈಸೂರು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ನಡೆಯುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಸುಮಂಗಲಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಹೆಚ್.ವಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.