ಚಾಮರಾಜನಗರ : ನಗರದ ಬಂಜಾರ ಇಂಡಿಯನ್ ಶಾಲೆಯಲ್ಲಿ ಲೀಡ್ ಸ್ಕೂಲ್ ಸಹಭಾಗಿತ್ವದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಿಂಗಾಪುರ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು. ಈ ಹಿನ್ನೆಲೆಯಲ್ಲಿ ಇಂದು ಶಾಲೆಯಲ್ಲಿ ಪೋಷಕರಿಗೆ ಒರಿಯೆಂಟೇಶನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲೀಡ್ ಸ್ಕೂಲ್ ಪ್ರಾದೇಶಿಕ ಮುಖ್ಯಸ್ಥ ಪ್ರಭು ಹಿರೇಮಠ ಮಾತನಾಡಿ, “ಮಗುವಿನ ಅತ್ಯುತ್ತಮ ಶಿಕ್ಷಣಕ್ಕಾಗಿ ಈ ಹೊಸ ಶಿಕ್ಷಣ ಕ್ರಮವನ್ನು ಜಾರಿಗೆ ತಂದಿದ್ದೇವೆ. ಪಠ್ಯಪುಸ್ತಕ ಆಧಾರಿತ ಕಂಠಪಾಠದಿಂದ ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದು, ಆದರೆ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ಮತ್ತು ವಿಮರ್ಶಾತ್ಮಕವಾಗಿ ಯೋಚಿಸುವ ಸಾಮರ್ಥ್ಯ ಕಡಿಮೆ ಆಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ 18 ವರ್ಷದ ಶಿಕ್ಷಣದ ನಂತರವೂ ಶೇ. 80ರಷ್ಟು ಪದವೀಧರರು ನಿರುದ್ಯೋಗಿಗಳಾಗುತ್ತಿರುವುದು ಇದೇ ಕಾರಣದಿಂದಾಗಿದೆ ಎಂದು ಹೇಳಿದರು.
ಅವರು ಮುಂದುವರಿದು, “ಲೀಡ್ ಸ್ಕೂಲ್ ಅಕಾಡೆಮಿಕ್ ಎಕ್ಸಲೆನ್ಸ್ ಸಿಸ್ಟಂ ಕೇವಲ ಪುಸ್ತಕ ಅಥವಾ ಸ್ಮಾರ್ಟ್ ಕ್ಲಾಸ್ ಅಲ್ಲ; ಇದು ಸಂಪೂರ್ಣ ಬೋಧನೆ ಮತ್ತು ಕಲಿಕೆಯ ಸಮಗ್ರ ವ್ಯವಸ್ಥೆಯಾಗಿದೆ. ಆಡಿಯೋ-ವಿಡಿಯೋ ಪಾಠಗಳು, ಚಟುವಟಿಕೆ ಆಧಾರಿತ ಕಲಿಕೆ, ಹಾಗೂ ಶಾಲೆಗೆ ಒದಗಿಸುವ ವಿಶೇಷ ಕಿಟ್ಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಿಕ್ಷಕರಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುತ್ತಿದ್ದು, ಟೀಚರ್ ಆಪ್ ಮೂಲಕ ಅತ್ಯುತ್ತಮ ಬೋಧನಾ ವಿಧಾನಗಳನ್ನು ಅನುಸರಿಸಲು ಸಹಕಾರಿಯಾಗುತ್ತದೆ ಎಂದರು.
ಇನ್ನೂ, ಟ್ಯಾಬ್ಗಳ ಮೂಲಕ ನೀಡುವ ವಿಡಿಯೋಗಳು ಮತ್ತು ಚಟುವಟಿಕೆ ಆಧಾರಿತ ಪಾಠಗಳಿಂದ ವಿದ್ಯಾರ್ಥಿಗಳು ಸುಲಭವಾಗಿ ಕಲಿಯುತ್ತಾರೆ. ಈ ಶಿಕ್ಷಣ ಕ್ರಮದ ಮೂಲಕ ಮಕ್ಕಳು ಕೇವಲ ಓದುತ್ತಾರೆ ಎಂಬುದಲ್ಲ, ಅರ್ಥಮಾಡಿಕೊಂಡು ಯೋಚಿಸುವ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ವಿಶೇಷವಾಗಿ, 6 ತಿಂಗಳ ಒಳಗೆ ಇಂಗ್ಲಿಷ್ ಓದಲು ಮತ್ತು ಮಾತನಾಡಲು ಸಾಧ್ಯವಾಗುತ್ತದೆ. ಪೋಷಕರು ಕೂಡ ಮಕ್ಕಳ ಕಲಿಕೆಯ ಭಾಗವಾಗುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕ ಬಸವಣ್ಣ ಮಾತನಾಡಿ“ಈ ರೀತಿಯ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳು ಸುಲಭವಾಗಿ ಇಂಗ್ಲಿಷ್ ಕಲಿಯಲು ಸಾಧ್ಯವಾಗುತ್ತದೆ ಮತ್ತು ಅವರ ಸಮಗ್ರ ಅಭಿವೃದ್ಧಿಗೆ ಇದು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಶಿವಾಜಿ ಮೇಘಾವತ್ ಮಾತನಾಡಿ, “ನಮ್ಮ ಶಾಲೆಯನ್ನು ಜಿಲ್ಲೆಯಲ್ಲಿ ನಂಬರ್ ಒನ್ ಶಿಕ್ಷಣ ಸಂಸ್ಥೆಯಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಲೀಡ್ ಸ್ಕೂಲ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸಿಂಗಾಪುರ ಮಾದರಿಯ ಗುಣಮಟ್ಟದ ಶಿಕ್ಷಣವನ್ನು ಪರಿಚಯಿಸಿದ್ದೇವೆ. ಈ ಅವಕಾಶವನ್ನು ಜಿಲ್ಲೆಯ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಲವಾರು ಪೋಷಕರು ಭಾಗವಹಿಸಿದ್ದರು.