ಚಾ.ನಗರದಲ್ಲಿ ಮಾಜಿ ರಾಜ್ಯಪಾಲ ದಿ. ಬಿ.ರಾಚಯ್ಯ ಅವರ ೧೦೧ನೇ ಜನ್ಮದಿನಾಚರಣೆ
ಚಾಮರಾಜನಗರ: ಬಿ. ರಾಚಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದರು ಸಹ ಅವಕಾಶ ದೊರೆಯಲಿಲ್ಲ. ಆದರೂ ಸಹ ಅವರು ನಿರ್ವಹಿಸಿದ ಎಲ್ಲಾ ಖಾತೆಗಳಲ್ಲಿಯು ತಮ್ಮ ಹೆಜ್ಜೆ ಗುರುತು ಬಿಟ್ಟು ಹೋದ ಅತ್ಯಂತ ಪ್ರಾಮಾಣಿಕತೆ, ಸರಳ ಸಜ್ಜನಿಕೆ ರಾಜಕಾರಣಿ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ ಅಭಿಪ್ರಾಯಪಟ್ಟರು.
ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಬಿ. ರಾಚಯ್ಯ ಪ್ರತಿಷ್ಠಾನದಿಂದ ನಡೆದ ಮಾಜಿ ರಾಜ್ಯಪಾಲ ದಿ. ಬಿ. ರಾಚಯ್ಯ ಅವರ ೧೦೧ ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಗಾಟಿಸಿ ಅವರು ಮಾತನಾಡಿದರು. ೧೯೫೨ರ ಮೊದಲ ಚುನಾನಣೆಯಿಂದಲು ವಿಧಾನಸಭೆಗೆ ಆಯ್ಕೆಯಾಗುವ ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ. ಡಾ. ಬಿ.ಆರ್. ಅಂಬೇಡರ್‍ಕ್ ಅವರ ಅಶಯವನ್ನು ಈಡೇರಿಸುವ ನಿಟ್ಟಿನಲ್ಲಿ ರಾಜಕಾರಣ ಮಾಡಿದವರು ಬಿ. ರಾಚಯ್ಯನವರು. ಅವರ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ, ಕೆಂಗಲ ಹನುಮಂತಯ್ಯ, ರಾಮಕೃಷ್ಣಹೆಗಡೆ, ದೇವರಾಜ ಅರಸು ರಂತಹ ಮಹಾನ್ ನಾಯಕರ ಸಂಪುಟದಲ್ಲಿ ಸಚಿವರಾಗಿದ್ದರು, ಒಂದಲ್ಲ ಏಕ ಕಾಲದಲ್ಲಿ ಎರಡು ಮೂರು ಖಾತೆಗಳನ್ನು ನಿರ್ವಹಿಸುವ ಮುಲಕ ತಮ್ಮ ಸಾಮಥ್ಯವನ್ನು ತೋರ್ಪಡಿಸಿದ್ದರು. ಇಂದು ಸಹ ರಾಜಕಾರಣದಲ್ಲಿ ಕುಟುಂಬದವರ ಹಸ್ತಕ್ಷೇಪ ಮಾಡದಂತೆ ಎಚ್ಚರ ವಹಿಸಿದ್ದರು. ಜೊತೆಗೆ ರಾಜಕಾರಣದಲ್ಲಿ ಹಣ ಆಸ್ತಿ ಮಾಡಬೇಕೆಂಬ ವ್ಯಾಮೋಹ ಅವರಲ್ಲಿರಲಿಲ್ಲ. ಹೀಗಾಗಿ ಅವರನ್ನು ಎಲ್ಲರು ಸಹ ಹೆಚ್ಚು ಪ್ರೀತಿ ಮಾಡುತ್ತಿದ್ದರು. ಅಧಿಕಾರಿ ವರ್ಗದವರು ಸಹ ರಾಚಯ್ಯ ಅವರ ಮುಂದೆ ನಿಂತು ಮಾತನಾಡಲು ಹೆದುರುತ್ತಿದ್ದರು. ಕಾರಣ. ಅವರ ಯಾವುದೇ ಪೈಲ್ ಕೊಟ್ಟರು ಸಹ ಸಂಪೂರ್ಣವಾಗಿ ಪರಿಶೀಲನೆ ಮಾಡಿಯೇ ಸಹಿ ಹಾಕುತ್ತಿದ್ದರು. ಸ್ವಲ್ಪ ಏರುಪೇರು ಇದ್ದರು ಸಹ ಸರಿಪಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದರು. ದಕ್ಷ ಆಡಳಿತಗಾರರು, ಮೈಸೂರು ಭಾಗಕ್ಕೆ ಹೆಚ್ಚು ನೀರಾವರಿ ಯೋಜನೆಯನ್ನು ಕೊಡುವ ಜೊತೆಗೆ ಈ ಭಾಗದ ಎರಡು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ, ಲಕ್ಷಾಂತರ ಮಂದಿ ರೈತರ ಕುಟುಂಬಗಳಿಗೆ ಬೆಳಕು ನೀಡಿದರು. ಹೀಗಾಗಿ ರಾಚಯ್ಯ ಅವರು ನಮ್ಮೆಗೆಲ್ಲ ದಾರಿದೀಪವಾಗಿದ್ದಾರೆ ಎಂದು ಸುದರ್ಶನ್ ಬಣ್ಣಿಸಿದರು.
ರಾಚಯ್ಯ ಅವರು ಸಂವಿಧಾನ ರಕ್ಷಣೆ ಮಾಡುವಲ್ಲಿ ಸಿದ್ದಹಸ್ತರಾಗಿದ್ದರು. ಅಂಬೇಡ್ಕರ್ ಆಶಯದಂತೆ ದೀನ ದಲಿತರು ಹಾಗೂ ಬಡವರ ಉದ್ದಾರಕ್ಕಗಿ ಅರಣ್ಯ ಸಚಿವರಾಗಿದ್ದಾಗ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಅವಕಾಶ ನೀಡಿ, ೧೮ಕ್ಕು ಹೆಚ್ಚು ಕಾಲೋನಿಗಳನ್ನು ನಿರ್ಮಾಣ ಮಾಡಿದರು. ಸುವರ್ಣವತಿ, ಚಿಕ್ಕಹೊಳೆ ನಿರ್ಮಾಣದಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ರೈತರು ಬೇಸಾಯ ಮಾಡಿ, ಜೀವನ ರೂಪಿಸಿಕೊಂಡಿದ್ದಾರೆ. ಕಂದಾಯ ಸಚಿವರಾಗಿ ರೈತರು ಕೃಷಿ ಭೂಮಿಗಳನ್ನು ಮಂಜೂರು ಮಾಡಿದರು. ಮೈಸೂರು ಪ್ರಾಂತ್ಯ ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿಯು ರಾಚಯ್ಯ ಅವರ ಹೆಸರು ಚಿರಸ್ಥಾಯಿ ಆಗಿದೆ ಎಂದರು.
ಈಗ ಅವರ ಮಕ್ಕಳಾದ ಎ.ಆರ್. ಕೃಷ್ಣಮೂರ್ತಿ, ಆರ್. ಬಾಲರಾಜು ಮತ್ತು ಕುಟುಂಬದವರು ಅವರ ಹಾದಿಯಲ್ಲಿ ಸಾಗುವ ಮೂಲಕ ರಾಚಯ್ಯ ಅವರ ವ್ಯಕ್ತಿತ್ವ ಮತ್ತು ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಆಲೂರಿನಲ್ಲಿ ಅವರ ಸ್ಮಾರಕ ಬಹಳ ಅದ್ಬುತವಾಗಿ ಮೂಡಿ ಬರುತ್ತಿದೆ. ಮುಂದಿನ ವರ್ಷದೊಳಗೆ ಅದು ಉದ್ಗಾಟನೆ ಗೊಂಡು ಅವರ ಜೀವನ ಚರಿತ್ರೆ ಸಂಫೂರ್ಣ ಚಿತ್ರಣ ಯುವ ಪೀಳಿಗೆ ತಲುಪುವಂತೆ ಮಾಡಬೇಕು ಎಂದರು.
ಬಿ.ರಾಚಯ್ಯ ಅವರ ಕುರಿತು ಗಾಂಧಿ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ> ಎಸ್. ಶಿವರಾಜಪ್ಪ ಮಾತನಾಡಿ, ರಾಚಯ್ಯ ಅವರು ಜೀವನ ತೆರೆದ ಪುಸ್ತಕವಾಗಿದೆ. ಅವರ ನುಡಿದಂತೆ ನಡೆದವರು. ಜೊತೆಗೆ ಅಂತರರಂಗ ಮತ್ತು ಬಹಿರಂಗ ಎರಡು ಸಹ ಒಂದೇ ಆಗಿತ್ತು. ಅಲ್ಲದೇ ತಮ್ಮ ರಾಜಕಾರಣದಲ್ಲಿ ಎಂದು ಸ್ವಂತಕ್ಕೆ ಎಂದು ಏನು ಮಾಡಿಕೊಳ್ಳಲಿ.. ಬಂಧು ಬಳಗದವರನ್ನು ಹತ್ತಿರಕ್ಕೆ ತೆಗೆದುಕೊಳ್ಳಲಿಲ್ಲ. ಎಲ್ಲವನ್ನು ಸಮಾಜಕ್ಕೆ ಮಾಡಿದ ಪರಿಣಾಮ ೧೦೧ ವರ್ಷವಾಗಿದ್ದರು ಇನ್ನು ಅವರ ಹೆಸರಿನಲ್ಲಿ ಕಾರ್ಯಕ್ರಮಗಳು, ಸ್ಮಾರಕ ನಿರ್ಮಾಣ ವಾಗುತ್ತಿದೆ. ಇಂಥ ಮೇರುವ್ಯಕ್ತಿತ್ವದ ನಾಯಕತ್ವನ್ನು ಹೊಂದಿದ್ದ ರಾಚಯ್ಯ ಅವರು ಕುಟುಂಬದವರು ಸಹ ಅವರ ಹಾದಿಯಲ್ಲಿ ಸಾಗುವ ಜೊತೆಗೆ ಅವರ ವ್ಯಕ್ತಿತ್ವನ್ನು ಇನ್ನು ಇಮ್ಮಡಿಗೊಳಿಸುತ್ತಿದ್ದಾರೆ. ಪುತ್ರರಾದ ಕೃಷ್ಣಮೂರ್ತಿ, ಬಾಲರಾಜ್ ಅವರ ನಡೆಯುವ ರಾಚಯ್ಯ ಅವರ ಆಲೋಚನೆ ಲಹರಿಯಂತೆ ಇದೆ. ಇಂಥ ರಾಜಕಾರಣಿಗಳ ಜೊತೆಯಲ್ಲಿ ನಾವು ಇದ್ದೇವು ಎನ್ನುವುದು ಹೆಮ್ಮೆಯಾಗಿದೆ ಎಂದು ಅವರ ಜೀವನ ಅನೇಕ ಘಟನಾವಳಿಯಲ್ಲಿ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಮಾಜಿ ಶಾಸಕ ಆರ್. ನರೇಂದ್ರ, ಮಾಜಿ ಸಂಸದ ಎಂ. ಶಿವಣ್ಣ ರಾಚಯ್ಯ ಅವರ ಕುರಿತು ಮಾತನಾಡಿದರು.
ಜಾನಪದ ಗಾಯಕ ಡಾ. ಮಳವಳ್ಳಿ ಮಹದೇವ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಂಸದರಾದ ಎಂ. ಶಿವಣ್ಣ, ಎ. ಸಿದ್ದರಾಜು, ಮಾಜಿ ಶಾಸಕರಾದ ಎಸ್. ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ, ಆರ್. ನರೇಂದ್ರ, ನಗರಸಭಾ ಮಾಜಿ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಅದ್ಯಕ್ಷರಾದ ಹೊಂಗನೂರು ಚಂದ್ರು, ತೋಟೇಶ್, ಮಹಮದ್ ಅಸ್ಗರ್, ಕೊಪ್ಪಳಿ ನಾಯಕ, ಲಕ್ಷ್ಮಿನರಸಿಂಹ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಕೇತಮ್ಮ, ಉಮ್ಮತ್ತೂರು ಭಾಗ್ಯಮ್ಮ, ಎಪಿಎಂಸಿ ನಿರ್ದೇಸಕ ಅಲೂರು ಪ್ರದೀಪ್, ಆರ್. ಮಹದೇವ್, ಕಂದಹಳ್ಳಿ ನಂಜುಂಡಸ್ವಾಮಿ, ಅಲೂರು ಪ್ರವೀಣ್, ಸಿದ್ದಯ್ಯನಪುರ ಗೋವಿಂದರಾಜು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು ಸ್ವಾಗತಿಸಿದರು. ಸಾಹಿತಿ ಸೋಮಶೇಖರ್ ಬಿಸಲ್ವಾಡಿ ನಿರೂಪಿಸಿದರು.