ಚಾಮರಾಜನಗರ: ಮಲೇರಿಯಾ ರೋಗ ತಡೆಗೆ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಅವಶ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಲೇರಿಯಾ ರೋಗ ಉಲ್ಭಣವಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ನಿಯಂತ್ರಣಗಳನ್ನು ಕ್ರಮಗಳನ್ನು ಅನುಸರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಿಗದಿತವಾಗಿ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾದ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡುವುದು, ನಿರ್ಮಾಣ ಹಂತದ ಕಟ್ಟಡಗಳು, ನಗರ, ಪಟ್ಟಣ, ಗ್ರಾಮ ವ್ಯಾಪ್ತಿಯಲ್ಲಿ ವಿಲೇವಾರಿಯಾಗದ ಕಸ, ಸ್ವಚ್ಚತೆ ಇಲ್ಲದ ಚರಂಡಿ, ಇತರೆ ವಿಧಾನಗಳಿಂದ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಸಹಕಾರ ಪಡೆದು ಹರಡುವ ಮಲೇರಿಯಾ ತಡೆಗಟ್ಟಲು ಸುರಕ್ಷಿತ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಮಲೇರಿಯಾ ನಿಯಂತ್ರಣಕ್ಕಾಗಿ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್, ಪ್ರಯೋಗಾಲಯಗಳ ಸಹಭಾಗಿತ್ವ ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ದಾಖಲಾಗುವ ಶಂಕಿತ ಡೆಂಗ್ಯೂ ಪ್ರಕರಣಗಳ ಬಗ್ಗೆ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಬೇಕು. ಅಲ್ಲದೆ ವಾರಕ್ಕೊಮ್ಮೆ ಜಿಲ್ಲಾಸರ್ವೆಕ್ಷಣಾ ಘಟಕಕ್ಕೂ ಸಹ ಈ ಬಗ್ಗೆ ವರದಿ ನೀಡಬೇಕು. ಡೆಂಗ್ಯೂ ಪರೀಕ್ಷೆ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮಾರ್ಗಸೂಚಿಗಳ ವಿವರಗಳನ್ನು ಆಸ್ಪತ್ರೆಗಳಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮಲೇರಿಯಾ ರೋಗವನ್ನು ತಡೆಯಲು ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆರೋಗ್ಯ ಇಲಾಖೆಯು ಏರ್ಪಡಿಸುವ ಜಾಥಾಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಸೊಳ್ಳೆ ನಿಯಂತ್ರಣದ ಕ್ರಮಗಳ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ಹಾಗೂ ಮಾಹಿತಿ ನೀಡಬೇಕು. ಪ್ರತಿ ಅಂಗನವಾಡಿಗಳಲ್ಲೂ ಕಿಟಕಿ ಗ್ಯಾಲರಿ ಹಾಗೂ ಸೊಳ್ಳೆ ಪರದೆ ಅಳವಡಿಸಿಕೊಳ್ಳಲು ತಿಳಿಹೇಳಬೇಕು ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಾಜೇಶ್ಕುಮಾರ್ ಅವರು ಮಾತನಾಡಿ ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ವಿವಿಧ ಬಗೆಯ ಜ್ವರಗಳನ್ನು ಮಲೇರಿಯಾ ಸೋಂಕು ಎಂದು ಪರಿಗಣಿಸಲಾಗುತ್ತದೆ. ಮಲೇರಿಯಾ ರೋಗವು ಅನಾಫಿಲೀಸ್ ಎಂಬ ಹೆಚ್ಚು ಸೊಳ್ಳೆಗಳಿಂದ ಹರಡಲಿದೆ. ಈ ಸೊಳ್ಳೆಗಳು ಸ್ವಾಭಾವಿಕ ನೀರಿನ ತಾಣಗಳಾದ ಕೆರೆಗಳು, ಭಾವಿಗಳು, ಕಾಲುವೆಗಳು, ಹೊಂಡಗಳಲ್ಲಿ ನಿಂತ ನೀರಿನಿಂದ ಹೆಚ್ಚಾಗಿ ಉಲ್ಭಣವಾಗಲಿವೆ. ಹೀಗಾಗಿ ಮಲೇರಿಯಾ ರೋಗ ನಿಯಂತ್ರಣಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೋಡೆಲ್ ಅಧಿಕಾರಿ ಡಾ. ಮಹೇಶ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ವಿವಿಧ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.