ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರದಂದು ಜಾತ್ರಾ ಮಹೋತ್ಸವಗಳು, ವಿಶೇಷ ಪೂಜೆ, ಉತ್ಸವಾದಿಗಳು ನಡೆಯಲಿವೆ.
ಅಕ್ಟೋಬರ್ 12ರಂದು ಮಹಾಲಯ ಜಾತ್ರೆ ಪ್ರಾರಂಭವಾಗಲಿದೆ. 13ರಂದು ಚದುರ್ದಶಿ ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ಹಾಗೂ 14ರಂದು ಮಹಾಲಯ ಅಮವಾಸ್ಯೆ ವಿಶೇಷ ಉತ್ಸವಾದಿಗಳು ಜರುಗಲಿವೆ.
ಅಕ್ಟೋಬರ್ 15ರಂದು ದಸರಾ ಜಾತ್ರಾ ಮಹೋತ್ಸವದ ಶರನ್ನವರಾತ್ರಿ ಉಯ್ಯಾಲೋತ್ಸವ ಪ್ರಾರಂಭವಾಗಲಿದೆ. 23ರಂದು ಮಹಾನವಮಿ, ಆಯುಧಪೂಜೆ ಹಾಗೂ 24ರಂದು ವಿಜಯದಶಮಿ, ಕುದುರೆ ವಾಹನೋತ್ಸವ ನಡೆಯಲಿದೆ.
ನವೆಂಬರ್ 10ರಂದು ದೀಪಾವಳಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಲಿದೆ. 11 ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಮತ್ತು ಉತ್ಸವಾದಿಗಳು, 12ರಂದು ನರಕ ಚತುರ್ದಶಿ ವಿಶೇಷ ಉತ್ಸವಾದಿಗಳು, 13ರಂದು ಅಮಾವಾಸ್ಯೆ, ಹಾಲರುವೆ ಉತ್ಸವ ಹಾಗೂ 14ರಂದು ದೀಪಾವಳಿ ಮಹಾರಥೋತ್ಸವವು ಬೆಳಿಗ್ಗೆ 8.50 ರಿಂದ 9.10 ಗಂಟೆಯವರೆಗೆ ಜರುಗಲಿದೆ.
ನವೆಂಬರ್ 20ರಂದು ಮೊದಲನೇ ಕಾರ್ತಿಕ ಸೋಮವಾರ, 27ರಂದು ಎರಡನೇ ಕಾರ್ತಿಕ ಸೋಮವಾರ, ಡಿಸೆಂಬರ್ 4ರಂದು ಮೂರನೇ ಕಾರ್ತಿಕ ಸೋಮವಾರದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. 11ರಂದು ನಾಲ್ಕನೇ ಕಾರ್ತಿಕ ಸೋಮವಾರದಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ರಾತ್ರಿ ಶ್ರೀ ಮಹದೇಶ್ವರ ಜ್ಯೋತಿ ದರ್ಶನ ಹಾಗೂ 12ರಂದು ಕಾರ್ತಿಕ ಅಮಾವಾಸ್ಯೆ ವಿಶೇಷ ಸೇವೆ ಉತ್ಸವಗಳು ನಡೆಯಲಿವೆ ಎಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಸರಸ್ವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.