ಮೂಡ್ನಾಕೂಡು ಡೇರಿಗೆ 7.32 ಲಕ್ಷ ರೂ. ನಿವ್ವಳ ಲಾಭ : ಎಂ ಬಸವಣ್ಣ ಗುಣಮಟ್ಟದ ಹಾಲು ಸಂಗ್ರಹಣೆಯಿಂದ ಡೇರಿಗೆ ಹೆಚ್ಚಿನ ಲಾಭ : ಎಚ್.ಎಸ್. ಬಸವರಾಜು

ಚಾಮರಾಜನಗರ: ಡೇರಿ ಗುಣಮಟ್ಟದ ಹಾಲು ಶೇಖರಣೆ ಮಾಡಿದ ಪರಿಣಾಮ ೭.೩೨ ಲಕ್ಷ ರೂ.ಗಳ ನಿವ್ವಳ ಲಾಭ ಪಡೆದುಕೊಂಡಿದ್ದು, ೩.೪೪ ಲಕ್ಷ ರೂ.ಗಳ ಬೋನಸ್ ಅನ್ನು ಹಾಲು ಉತ್ಪಾದಕರಿಗೆ ನೀಡುವುದಾಗಿ ಮೂಡ್ನಾಕೂಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ಬಸವಣ್ಣ ತಿಳಿಸಿದರು.

ತಾಲೂಕಿನ ಮೂಡ್ನಾಕೂಡು ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ೧.೫೩ ಕೋಟಿ ರೂ.ಗಳ ವ್ಯಾಪಾರ ವಹಿವಾಡು ನಡೆಸಿದ್ದೇವೆ. ಪ್ರತಿ ದಿನ ೧೮೦೦ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ನಮ್ಮದು ಬಿಎಂಸಿ ಕೇಂದ್ರವಾಗಿರುವುದರಿಂದ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.

ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಹಾಸಭೆಯನ್ನು ಉದ್ಗಾಟಿಸಿ ಮಾತನಾಡಿ, ರೈತರು ಹೈನುಗಾರಿಕೆಯನ್ನು ಅವಲಂಭಿಸುವ ಜೊತೆಗೆ ತಾವು ಹೊಂದಿರುವ ರಾಸುಗಳಿಗೆ ವಿಮೆ ಸೌಲಭ್ಯವನ್ನು ಪಡೆದು ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಬೇಕು. ಇದಕ್ಕಾಗಿ ವರ್ಷದ ಪ್ರೀಮಿಯಂನಲ್ಲಿ ಒಕ್ಕೂಟ ಶೇ. ೫೦ರಷ್ಟು ಭರಿಸುತ್ತದೆ. ಇನ್ನುಳಿದ ಹಣವನ್ನು ಉತ್ಪಾದಕರು ಪಾವತಿಸಿ, ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಿ ಎಂದರು. ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಗುಣಮಟ್ಟದ ಹಾಲು ಪೊರೈಕೆಯಿಂದ ಸಂಘ ಅಭಿವೃದ್ದಿ ಯಾಗುತ್ತದೆ. ಡೇರಿಗೆ ಗುಣಮಟ್ಟದ ಹಾಲು ಪೊರೈಕೆಯಿಂದ ಹಾಲಿನ ಮಾರಾಟದ ಜೊತೆಗೆ ಉಪ ಉತ್ಪನ್ನಗಳನ್ನು ತಯಾರು ಮಾಡಲು ಸಹಕಾರಿಯಾಗುತ್ತದೆ. ಅಲ್ಲದೇ ನಿಮ್ಮಿಂದ ಖರೀದಿಸಿದ ಹಾಲ೦ನ್ನು ನೇರವಾಗಿ ಹೊರರಾಜ್ಯಗಳಿಗೆ ಕಳುಹಿಸುವುದರಿಂದ ಗುಣಮಟ್ಟದಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಾಗಿದೆ. ಇದರಿಂದ ಡೇರಿ ಹಾಗೂ ಒಕ್ಕೂಟದ ಬೆಳವಣಿಗೆ ನೀವು ನೀಡುವ ಗುಣಮಟ್ಟದ ಹಾಲಿನಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಬಸವಣ್ಣ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ, ಚಾಮುಲ್ ವಿಸ್ತಾರಣಾಧಿಕಾರಿ ನಾಗೇಶ್, ನಿರ್ದೇಶಕರಾದ ಶಿವನಾಗಪ್ಪ, ಪ್ರಕಾಶ್, ಎಂ.ಎನ್.ಕುಮಾರ್, ಎಂ.ಎಂ. ಪ್ರಭು, ಚಿನ್ನಸ್ವಾಮಿ, ಎಂ.ಸಿ.ರಾಜು, ಗಣೇಶ್, ನಾಗಮ್ಮ, ಸುಂದ್ರರಮ್ಮ, ನೌಕರರಾದ ಎಸ್. ನಾಗೇಂದ್ರ, ಮಹೇಶ್, ಎಲ್. ನಟರಾಜು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *