
ಚಾಮರಾಜನಗರ ತಾಲೂಕು, ಬಾಗಳಿ ಗ್ರಾಮದ ಬಾಗಳಿ ಮಹೇಶ್ ರವರು ರಾಜ್ಯಮಟ್ಟದ ‘ ಕನ್ನಡ ವಿಕಾಸ ರತ್ನ ‘ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಕೊಡ ಮಾಡುವ ರಾಜ್ಯಮಟ್ಟದ ‘ಕನ್ನಡ ವಿಕಾಸರತ್ನ’ ಪ್ರಶಸ್ತಿಗೆ ಗಾಯನ ಕ್ಷೇತ್ರ, ರಂಗಭೂಮಿ ಕ್ಷೇತ್ರ, ಹವ್ಯಾಸಿ ಬರಹಗಾರ ಕ್ಷೇತ್ರ ದಲ್ಲಿ ಸೇವೆ ಸಲ್ಲಿಸುತ್ತಿರುವ ಸಂತ ಜೋಸೆಫರ ಕೇಂದ್ರೀಯ ಶಾಲೆ ವಿಜಯನಗರ ಮೈಸೂರು ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಾಗಳಿ ಮಹೇಶ್ ರವರಿಗೆ ನವೆಂಬರ್ 30ರಂದು ನಡೆಯುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ‘ ಕನ್ನಡ ವಿಕಾಸ ರತ್ನ ‘ ಪುರಸ್ಕಾರವನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್ ಎಲ್ ಯಮುನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಗಳಿ ಮಹೇಶ್ ರವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಪ್ರವೃತ್ತಿಯಲ್ಲಿ ಗಾಯಕ, ರಂಗಭೂಮಿ ಕಲಾವಿದ, ನಿರೂಪಕ, ಹವ್ಯಾಸಿ ಬರಹಗಾರರಾಗಿ ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ತಾಲೂಕು,ಜಿಲ್ಲೆ, ರಾಜ್ಯಮಟ್ಟದಲ್ಲಿ ತತ್ವಪದ, ಜನಪದ, ವಚನ ಗಾಯನ, ರಂಗಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅನೇಕ ಬಹುಮಾನಗಳನ್ನು ಪಡೆದುಕೊಂಡು ಕಾಲೇಜಿಗೆ ಪಾರಿತೋಷಕಗಳನ್ನು ಗಳಿಸಿ ಕೊಟ್ಟಿರುತ್ತಾರೆ. ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ, ಕನ್ನಡ ನಾಡು ನುಡಿಗೆ ಸಂಬಂಧಿಸಿ ದಂತೆ, ಕವಿ ಸಾಧಕರಿಗೆ ಸಂಬಂಧಿಸಿದಂತೆ 16 ಲೇಖನಗಳನ್ನು ಬರೆದು ಅನೇಕ ಪತ್ರಿಕೆಗಳಲ್ಲಿ ಪ್ರಕಟಣೆಯಾಗಿ ಓದುಗರಿಂದ ಮೆಚ್ಚುಗೆಯನ್ನು ಗಳಿಸಿರುತ್ತಾರೆ.
ಅನೇಕ ಶಿಕ್ಷಣ ಸಂಸ್ಥೆಗಳು ನಡೆಸುವ ಅಂತರಾ ಶಾಲಾ ಮಟ್ಟದ ಗೀತ ಗಾಯನ, ಚರ್ಚಾ ಸ್ಪರ್ಧೆ, ಪ್ರಬಂಧ ಬರವಣಿಗೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಸುತ್ತೂರು, ಮಹಾತ್ಮ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಮೈಸೂರು, ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಚಾಮರಾಜನಗರ ಇಲ್ಲಿನ ಪ್ರಶಿಕ್ಷಣಾರ್ಥಿಗಳಿಗೆ ಕನ್ನಡ ಪದ್ಯ, ಗದ್ಯ, ವ್ಯಾಕರಣ ಬೋಧನೆಯ ವಿಷಯವಾಗಿ ಚಟುವಟಿಕೆಯಾಧಾರಿತ ಪ್ರಾಯೋಗಿಕ ತರಗತಿಗಳನ್ನು, ವಿಚಾರ ಮಂಟಪವನ್ನು ನಡೆಸಲಾಗಿದೆ. ಕುವೆಂಪುರವರ ಜನುಮ ಶತಮಾನ ಮತ್ತು ಗಾಯಕ ಅಶ್ವತ್ ರವರ ಸ್ಮರಣೆ ಅಂಗವಾಗಿ ನಗರ ವಸ್ತು ಪ್ರದರ್ಶನದ ಪ್ರಾಧಿಕಾರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೌಟಿಲ್ಯ ಶಾಲೆಯ 120 ವಿದ್ಯಾರ್ಥಿಗಳಿಗೆ ವಚನ ಗಾಯನ, ದೇಶಭಕ್ತಿ ಗೀತೆಗಳ ತರಬೇತಿಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಆಯೋಜಕರಿಂದ ಉತ್ತಮ ಪುರಸ್ಕಾರ ಪಡೆಯಲಾಯಿತು.
ಅಲ್ಲದೆ ದೆಹಲಿಯಲ್ಲಿ ನಡೆದ ಹೊರನಾಡು ಉತ್ಸವ, ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ, ಮಂಗಳೂರಿನ ಕುದ್ರೋಳಿ ದಸರಾ, ಮೈಸೂರು ದಸರಾ, ಸುತ್ತೂರು ಜಾತ್ರೆ ಇವೇ ಮುಂತಾದ ರಾಜ್ಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಗಾಯನ, ನಟನೆ, ನಿರೂಪಣೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರಸಂಶೆಗೆ ಪಾತ್ರರಾಗಿದ್ದಾರೆ. ಕಾಯಕವೇ ಕೈಲಾಸ, ಸಂಸಾರದಲ್ಲಿ ಗಾದೆ, ಮೂರ್ಖ ರಾಜ ಮುಂತಾದ ಮಕ್ಕಳ ನಾಟಕಗಳನ್ನು ಶಾಲಾ ಮಕ್ಕಳಿಗೆ ನಿರ್ದೇಶನ ಮಾಡಿದ್ದಾರೆ. ಸಂಸಾರದಲ್ಲಿ ಗಾದೆ ನಾಟಕವು ಆಕಾಶವಾಣಿಯಲ್ಲಿ ಪ್ರಸಾರಗೊಂಡಿರುತ್ತದೆ. ಶಬರ ಶಂಕರ ವಿಲಾಸ, ಕುರುಕ್ಷೇತ್ರ, ಭಕ್ತ ಪ್ರಹ್ಲಲಾದ, ದಾನ ಶೂರ ಕರ್ಣ, ಪ್ರಚಂಡ ರಾವಣ, ದಕ್ಷ ಯಜ್ಞ ಇವೇ ಮುಂತಾದ ನಾಟಕಗಳಲ್ಲಿ ಹಾಸ್ಯ ಹಾಗೂ ಬ್ರಹ್ಮ, ನಾರದ, ಮಾರೀಚ, ಒಕ್ಕಣ್ಣ, ಸನಕಾದಿ, ಸೂತ್ರಧಾರಿ, ಶಿವಯೋಗಿ, ಅಭಿಮನ್ಯು, ಶುಕ್ಲಾಚಾರಿ, ವೃದ್ಧ ಮುಂತಾದ ಪಾತ್ರಗಳನ್ನು ಅಭಿನಯಿಸಿ ಜನಮನ್ನಣೆಯನ್ನು ಗಳಿಸಿದ್ದಾರೆ.
ಹೀಗೆ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕೌಟಿಲ್ಯ ವಿದ್ಯಾಲಯವು ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು 2021ರ ಸಾಂಸ್ಕೃತಿಕ ಸೇವಾ ರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಅಲ್ಲದೆ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಉತ್ತಮ ಸಾಂಸ್ಕೃತಿಕ ಪ್ರತಿಭೆ ಎಂಬ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.